Advertisement

ಮನೆ ಮೇಲೆ ಕುಸಿದ ಬ್ರಹ್ಮಗಿರಿ

02:09 AM Aug 07, 2020 | Hari Prasad |

ಮಡಿಕೇರಿ: ಬಿರುಗಾಳಿ ಸಹಿತ ಮಹಾಮಳೆಗೆ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ (80) ಸಹಿತ ಐವರು ನಾಪತ್ತೆಯಾಗಿರುವ ಘಟನೆ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

Advertisement

ತಲಕಾವೇರಿ ದೇವಸ್ಥಾನದ ಅರ್ಚಕರ ಎರಡು ಮನೆಗಳ ಮೇಲೆ ಬೆಟ್ಟವೇ ಜಾರಿ ಬಂದಿದ್ದು, ಪ್ರವಾಹದ ರೀತಿ ಹರಿದ ನೀರು, ಮಣ್ಣು ಮತ್ತು ಬಿದ್ದ ಮರಗಳ ರಭಸಕ್ಕೆ ಮನೆಗಳ ಸಹಿತ ವ್ಯಕ್ತಿಗಳು ಮತ್ತು ಎಲ್ಲ ಪರಿಕರಗಳು ನಾಪತ್ತೆಯಾಗಿವೆ. ದುರಂತ ನಡೆದ ಪ್ರದೇಶದಲ್ಲಿ ಮನೆಗಳಿದ್ದ ಕುರುಹುಗಳೇ ಇಲ್ಲದಾಗಿವೆ.

ನಾರಾಯಣ ಆಚಾರ್‌ ಅವರ ಪತ್ನಿ ಶಾಂತಾ (70), ಸಹೋದರ ಆನಂದತೀರ್ಥ ಸ್ವಾಮಿ (86), ಸಹಾಯಕ ಅರ್ಚಕರಾದ ಕಾಸರಗೋಡಿನ ಮುಳ್ಳೇರಿಯಾದ ಶ್ರೀನಿವಾಸ ಪಡ್ಡಿಲ್ಲಾಯ (36) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ರವಿಕಿರಣ್‌ (29) ಅವರು ಮನೆಯಲ್ಲಿದ್ದರು ಎನ್ನಲಾಗಿದೆ.

ಸಹಾಯಕ ಅರ್ಚಕರಿಬ್ಬರೂ ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಊರುಗಳಿಂದ ತಲಕಾವೇರಿಗೆ ಬಂದಿದ್ದರು. ಇವರಿಬ್ಬರೂ ಅವಿವಾಹಿತರಾಗಿದ್ದಾರೆ. ನಾರಾಯಣ ಆಚಾರ್‌ ಅವರಿಗೆ ಇಬ್ಬರು ಪುತ್ರಿಯರಿದ್ದು, ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಘಟನೆ ಸಂದರ್ಭ ಹಸುಗಳು ಮತ್ತು ಕೆಲವು ವಾಹನಗಳು ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಐವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‌ಡಿಆರ್‌ಎಫ್ ತಂಡ ಶೋಧ ಆರಂಭಿಸಿದೆ.


ಕಿ.ಮೀ. ದೂರದಲ್ಲಿ ಸಾಮಗ್ರಿ
ಬೆಟ್ಟ ಯಾವ ರೀತಿ ಕುಸಿದಿದೆ ಎಂದರೆ ನಾರಾಯಣ ಆಚಾರ್‌ ಅವರ ಮನೆಯ ಸಾಮಗ್ರಿಗಳು ಕಿ.ಮೀ.ಗಟ್ಟಲೆ ದೂರ ಚೆಲ್ಲಾಪಿಲ್ಲಿಯಾಗಿ ಸಿಕ್ಕಿವೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾರಿನ ಒಂದು ಬಾಗಿಲು ಬಿದ್ದಿತ್ತು. ಅವರ ಮನೆಯ ಹಸುವಿನ ಕಳೇಬರ ಭಾಗಮಂಡಲ ಬಳಿ ಕಂಡಿತ್ತು.

Advertisement

ಭಾಗಮಂಡಲ, ತಲಕಾವೇರಿ ಯಲ್ಲಿ ಗಾಳಿ-ಮಳೆಯಾಗುತ್ತಿರುವುದರಿಂದ ಮತ್ತು ದುರಂತ ನಡೆದ ಪ್ರದೇಶದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜೆಸಿಬಿ ಯಂತ್ರವನ್ನು ತರಲು ಭಾಗಮಂಡಲ ರಸ್ತೆಯುದ್ದಕ್ಕೂ ಬಿದ್ದಿರುವ ಮಣ್ಣಿನ ರಾಶಿ ತಡೆಯಾಗಿದೆ. ಅಲ್ಲದೆ ಭಾಗ ಮಂಡಲದಲ್ಲಿ ಕಾವೇರಿ ನದಿ ಪ್ರವಾಹದ ರೂಪದಲ್ಲಿ ರಸ್ತೆ ಯನ್ನು ಆವರಿಸಿದ್ದು, ವಾಹನಗಳ ಸಂಚಾರ ಕಷ್ಟ ಸಾಧ್ಯವಾಗಿದೆ. ಶುಕ್ರವಾರ ಕಾರ್ಯಾಚರಣೆಯನ್ನು ಮುಂದುವರಿಸುವು ದಾಗಿ ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.


ಅಲ್ಲಲ್ಲಿ ಭೂಕುಸಿತ
ಭಾಗಮಂಡಲದಿಂದ ತಲ ಕಾವೇರಿಗೆ ತೆರಳುವ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಘನ ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ, ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಂತ್ರಸ್ತರಾಗಿರು ವವರಿಗೆ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 20 ಕುಟುಂಬಗಳ 48 ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎಂ.ಪಿ. ಸುನೀಲ್‌ ಸುಬ್ರಮಣಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಬನ್ನಿ ಎಂದರೂ ಬಂದಿರಲಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ. ಬೋಪಯ್ಯ, ನಾರಾಯಣ ಆಚಾರ್‌ ಅವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈ ಹಿಂದೆ ಮನವಿ ಮಾಡಿಕೊಂಡರೂ ಕಾವೇರಮ್ಮನ ಸನ್ನಿಧಿಯಲ್ಲೇ ಇರುವುದಾಗಿ ತಿಳಿಸಿ ಹಠ ಮಾಡಿದ್ದರು. ನಿನ್ನೆ ಸಂಜೆಯೂ ಕೊಡಗಿನ ಡಿವೈಎಸ್‌ಪಿ ಅವರು ಅಲ್ಲಿಗೆ ತೆರಳಿ ನಾರಾಯಣ ಆಚಾರ್‌ ಅವರನ್ನು ಸುರಕ್ಷಿತ ಸ್ಥಳಕ್ಕೆ ಬರುವಂತೆ ಕರೆದಿದ್ದರು ಎಂದರು.

ಬಂಟ್ವಾಳ, ಅಡೂರು ವ್ಯಕ್ತಿಗಳು ನಾಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಕಾಸರಗೋಡು ಜಿಲ್ಲೆಯ ಅಡೂರು ಮೂಲದ ಅರ್ಚಕರಿಬ್ಬರು ಕೂಡ ನಾಪತ್ತೆಯಾಗಿದ್ದಾರೆ. ಕಳ್ಳಿಗೆ ಗ್ರಾಮದ ಕನಪ್ಪಾಡಿ ನಿವಾಸಿ ರಾಮಕೃಷ್ಣ ರಾವ್‌(ಅಪ್ಪಣ್ಣ ಭಟ್‌) ಅವರ ಪುತ್ರ ರವಿಕಿರಣ್‌ ಮತ್ತು ಅಡೂರು ಕಾಯರ್ತಿಮೂಲೆ ನಿವಾಸಿ ದಿ| ಲಕ್ಷ್ಮೀನಾರಾಯಣ ಪಡ್ಡಿಲ್ಲಾಯ -ಸತ್ಯಭಾಮಾ ದಂಪತಿಯ ಪುತ್ರ ಶ್ರೀನಿವಾಸ ಪಡ್ಡಿಲ್ಲಾಯ ನಾಪತ್ತೆಯಾದವರು. ಇವರು 2 ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕ ರಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ಡೌನ್‌ ವೇಳೆ ಊರಿಗೆ ಬಂದಿದ್ದರು. ಲಾಕ್‌ಡೌನ್‌ ಮುಗಿದ ಬಳಿಕ ಇತ್ತೀಚೆಗಷ್ಟೇ ಮತ್ತೆ ಅಲ್ಲಿಗೆ ತೆರಳಿದ್ದರು. ಮುಖ್ಯ ಅರ್ಚಕರ ಮನೆ ಯಲ್ಲೇ ನೆಲೆಸಿದ್ದರು.
ರಾಮಕೃಷ್ಣ ರಾವ್‌ ಅವರ ಇಬ್ಬರು ಪುತ್ರರಲ್ಲಿ ರವಿಕಿರಣ್‌ ಹಿರಿಯವರಾಗಿದ್ದಾರೆ.

ಭಾಗಮಂಡಲದಲ್ಲಿ ಸುರಿದಿತ್ತು 49 ಸೆಂ.ಮೀ. ಮಳೆ
ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗಿನ 24 ತಾಸುಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 49 ಸೆಂ.ಮೀ. ಮಳೆ ಸುರಿದಿತ್ತು. ಇದು ಈ ಅವಧಿಯಲ್ಲಿ ರಾಜ್ಯದಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

2018ರ ದುರ್ಘ‌ಟನೆ ಪುನರಾವರ್ತನೆ?
ಎರಡು ವರ್ಷಗಳ ಹಿಂದೆ, 2018ರಲ್ಲಿಯೂ ಆಗಸ್ಟ್‌ ದ್ವಿತೀಯ ವಾರದಲ್ಲಿ ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಭೂಕುಸಿತ ಗಳು ಸಂಭವಿಸಿ ಹಲವು ಊರುಗಳೇ ಕಣ್ಮರೆಯಾಗಿದ್ದವು. ಅಪಾರ ನಾಶನಷ್ಟ, ಸಾವು-ನೋವು ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next