Advertisement

ಮಾವು ಉತ್ಪಾದನೆಯಲ್ಲಿ ಭಾರಿ ಕುಸಿತ

03:00 PM May 14, 2019 | Team Udayavani |

ಕೊಪ್ಪಳ: ಹಣ್ಣುಗಳ ರಾಜ ಮಾವಿನ ಹಣ್ಣಿನ ಹಂಗಾಮು ಆರಂಭವಾಗಿದೆ. ಆದರೆ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ಭಾರಿ ಕುಸಿತ ಕಾಣುತ್ತಿದೆ. ಹವಾಮಾನ ವೈಪರೀತ್ಯ, ಗಾಳಿ, ರೋಗಭಾದೆ ಸೇರಿ ನಾನಾ ತೊಂದರೆಗಳು ಮಾವಿಗೆ ಕಾಡುತ್ತಿರುವುದರಿಂದ ಉತ್ಪಾದನೆಯಲ್ಲಿ ಇಳಿಮುಖವಾಗುತ್ತಿದೆ.

Advertisement

ಒಂದು ಕಾಲದಲ್ಲಿ ತೋಟಗಾರಿಕೆ ಬೆಳೆಗೆ ಹೆಸರಾಗಿದ್ದ ಕೊಪ್ಪಳ ಜಿಲ್ಲೆಯು ಇತ್ತೀನ ದಿನಗಳಲ್ಲಿ ಇರುವ ಬೆಳೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ರೈತರು ಸಾಕಷ್ಟು ಶ್ರಮಿಸುತ್ತಿದ್ದರೂ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿಲ್ಲ. ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣಿನ ಉತ್ಪಾದನೆ ತೀರಾ ಕುಸಿದಿದೆ. ಜಿಲ್ಲೆಯಲ್ಲಿ ಮಾವಿನ ಗಿಡಗಳ ನಾಟಿ, ಉತ್ಪಾದನೆಯ ಅಂಕಿ-ಅಂಶಗಳನ್ನು ಅವಲೋಕಿಸಿದರೆ ಮೂರು ವರ್ಷಗಳಲ್ಲಿ ಏರಿಕೆಗಿಂತ ಇಳಿಮುಖ ಕಂಡಿದೆ ಹೆಚ್ಚು.

ತೋಟಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 2766 ಹೆಕ್ಟೇರ್‌ ಪ್ರದೇಶದಲ್ಲಿ 35,140 ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗಿದೆ. 2018-19ನೇ ಸಾಲಿನಲ್ಲಿ 2565 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, 31,562 ಮೆಟ್ರಿಕ್‌ನಷ್ಟು ಮಾವು ಉತ್ಪಾದನೆಯಾಗಿದೆ. ಇನ್ನೂ 2019-20ನೇ ಸಾಲಿನಲ್ಲಿ 3,000 ಹೆಕ್ಟೇರ್‌ನಲ್ಲಿ ಮಾವು ಬೆಳೆದಿದ್ದು, 10 ಸಾವಿರ ಮೆಟ್ರಿಕ್‌ ಟನ್‌ನಷ್ಟು ಮಾತ್ರ ಉತ್ಪಾದನೆಯಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಮಾವಿನ ಗಿಡಗಳ ನಾಟಿ ಪ್ರದೇಶ ಹೆಚ್ಚುತ್ತಿದ್ದರೂ ಉತ್ಪಾದನೆಯಲ್ಲಿ ಇಳಿಮುಖ ಕಾಣುತ್ತಿದೆ.

ಉತ್ಪಾದನೆ ಏಕೆ ಇಳಿಮುಖ?: ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ಮಾವು ದೀರ್ಘ‌ಕಾಲದ ಬೆಳೆಯಾದರೂ ರೈತರ ಜಮೀನಿನಲ್ಲಿ ಅಂತರ್ಜಲಮಟ್ಟ ಕುಸಿತ ಕಾಣುತ್ತಿದೆ. ಗಿಡಗಳಿಗೆ ಬೇಸಿಗೆಯ ವೇಳೆ ಸಕಾಲಕ್ಕೆ ನೀರು ಪೂರೈಕೆ ಮಾಡಲು ಕಷ್ಟ ಸಾಧ್ಯವಾಗುತ್ತಿದೆ. ಅದರಲ್ಲೂ ಹವಾಮಾನ ವೈಪರಿತ್ಯ ಜಿಲ್ಲೆಯಲ್ಲಿ ಕಾಡುತ್ತಿದೆ. ಒಂದೊಮ್ಮೆ ಅತ್ಯಧಿಕ ಬಿಸಿಲಿನ ತಾಪವಿರುತ್ತದೆ. ಇನ್ನೂ ಮೇ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತದೆ. ಇದರಿಂದ ಮಾವಿನ ಗಿಡದ ಟೊಂಗೆಗಳು ನೆಲ ಕಚ್ಚುತ್ತಿವೆ. ಜೊತೆಗೆ ಕಾಯಿಗಳು ಉದುರುತ್ತಿವೆ. ಮೊಗ್ಗು ಗಾಳಿಗೆ ಉದುರಿ ಇಳುವರಿ ಕುಂಠಿತವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತವೆ. ಇನ್ನೂ ರೋಗಗಳ ಬಾಧೆಯೂ ಕಾಡುತ್ತಿದ್ದು, ರೈತರು ಸಕಾಲಕ್ಕೆ ಔಷಧಿ ಸಿಂಪರಣೆ ಮಾಡುವುದು. ಆರೈಕೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೇಸರ್‌, ದಶಹರಿ, ಬೆನೆಶಾನ್‌, ಆಫೂಸ್‌, ಸರ್ವರೇಖಾ ಪ್ರಮುಖವಾಗಿ ಬೆಳೆಯುವ ಮಾವಿನ ತಳಿಗಳಾಗಿದ್ದು, ಇವುಗಳ ಉತ್ಪಾದನೆ ಈ ಬಾರಿ ಕುಸಿತ ಕಂಡಿದೆ. ಮಳೆಯ ಕೊರತೆ ಜೊತೆಗೆ ಮಾವಿನ ಗಿಡಗಳು ಎರಡು ವರ್ಷಕ್ಕೊಮ್ಮೆ ಉತ್ಪಾದನೆಯನ್ನು ಕಡಿಮೆ ಮಾಡುತ್ತವೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ಒಟ್ಟಿನಲ್ಲಿ ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೂ, ಉತ್ಪಾದನೆ ಕುಸಿತದಿಂದ

Advertisement

ಅನ್ಯ ಜಿಲ್ಲೆ, ರಾಜ್ಯಗಳ ಮಾವು ಜಿಲ್ಲೆಗೆ ಲಗ್ಗೆಯಿಟ್ಟಿವೆ. ಮಾವಿನ ಉತ್ಪಾದನೆಯ ಹೆಚ್ಚಳಕ್ಕೆ ತೋಟಗಾರಿಕೆ ಇಲಾಖೆಯು ಪರ್ಯಾಯ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ರೋಗಬಾಧೆ ನಿಯಂತ್ರಣ ಮಾಡುವ ಜೊತೆಗೆ ಹವಾಮಾನ ವೈಪರಿತ್ಯದ ಮಧ್ಯೆಯೂ ಬೆಳೆ ರಕ್ಷಣೆಗೆ ದಾರಿಗಳನ್ನು ಹುಡುಕಬೇಕಿದೆ.

ಜಿಲ್ಲೆಯಲ್ಲಿ ಈ ವರ್ಷ ಮಾವಿನ ಉತ್ಪಾದನೆ ಇಳಿಮುಖವಾಗಿದೆ. ಮಳೆಯ ಕೊರತೆ, ಹವಾಮಾನ ವೈಪರಿತ್ಯ ಸೇರಿದಂತೆ ಅಧಿಕ ಗಾಳಿ ಬೀಸುವುದರಿಂದ ಗಿಡದಲ್ಲಿನ ಕಾಯಿಗಳು, ಹೂವು ಉದುರುತ್ತವೆ. ಹೀಗಾಗಿ ಉತ್ಪಾದನೆ ಕಡಿಮೆಯಾಗಿದೆ. ಇನ್ನೂ ಈ ವರ್ಷ ಆಫ್‌ ಸೀಜನ್‌ ಆಗಿದ್ದರಿಂದಲೂ ಉತ್ಪಾದನೆಯ ಕುಸಿತವಾಗಿದೆ.

•ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ನಮ್ಮ ಜಮೀನಿನಲ್ಲಿ 260 ಮಾವಿನ ಗಿಡಗಳನ್ನು ನಾಟಿ ಮಾಡಿದ್ದೇನೆ. ಅದರಲ್ಲಿ ಈ ವರ್ಷ 60ಕ್ಕೂ ಹೆಚ್ಚು ಗಿಡಗಳು ಒಣಗಿ ಹೋಗಿವೆ. ಉಳಿದ ಗಿಡಗಳ ಉಳಿವಿಗೆ ಅಲ್ಪ ನೀರನ್ನೇ ಪೂರೈಕೆ ಮಾಡುತ್ತಿದ್ದೇವೆ. ಗಾಳಿಗೆ ಕಾಯಿ ಉದುರುತ್ತವೆ. ಕೆಲವೊ ರೋಗಬಾಧೆಯಿಂದ ಒಣಗಿ ಹೋಗಿವೆ. ಇರುವ ಗಿಡಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ.

•ಯಮನೂರಪ್ಪ ಕುರಿ, ಕಲ್ಲತಾವರಗೇರಾ ರೈತ

Advertisement

Udayavani is now on Telegram. Click here to join our channel and stay updated with the latest news.

Next