Advertisement

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್‌ ಸಮಾವೇಶ: ವೆಂಕಟೇಶ್‌

07:10 AM Aug 06, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಹಾಗೂ ಸರಕಾರದ ವಿವಿಧ ಜನಪರ ಯೋಜನೆಗಳ ಅನುಷ್ಠಾನದ ಬಗ್ಗೆ ವಿವರ ನೀಡುವ ಬೃಹತ್‌ ಸಮಾವೇಶಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ದ.ಕ. ಜಿಲ್ಲಾ ಉಸ್ತುವಾರಿ ಯು.ಬಿ. ವೆಂಕಟೇಶ್‌ ತಿಳಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ನಾಯಕರು, ರಾಜ್ಯ ಉಸ್ತುವಾರಿಗಳು, ಕೆಪಿಸಿಸಿ ನಾಯಕರು ಭಾಗವಹಿಸುವರು. ಕಾಂಗ್ರೆಸ್‌ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ವರ್ಷಗಳ ಅವಧಿಯಲ್ಲಿ ಅನುಷ್ಟಾನಗೊಳಿಸಿರುವ ಅಭಿವೃದ್ಧಿ ಯೋಜನೆಗಳು, ವಿನಿಯೋಗಿಸಿರುವ ಅನುದಾನಗಳು, ಸರಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾಡಿರುವ ಸಾಧನೆಗಳನ್ನು ಜನತೆಯ ಮುಂದಿಡಲಾಗುವುದು ಎಂದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನೀತಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ವಿಪಕ್ಷಗಳ ಮೇಲೆ ದಮನಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಕುದುರೆ ವ್ಯಾಪಾರ
ಶಾಸಕ ಅಭಯಚಂದ್ರ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರನ್ನು ಸೆಳೆದುಕೊಳ್ಳಲು “ಕುದುರೆ ವ್ಯಾಪಾರ’ ನಡೆಸುತ್ತಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಗುಜರಾತ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಾಗ ಸರಕಾರ ಅವರಿಗೆ ಭದ್ರತೆ ನೀಡಬೇಕಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ. ಇದು ಖಂಡನೀಯ ಎಂದರು.

ಶಾಸಕ ಮೊದಿನ್‌ ಬಾವಾ ಅವರು ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ವಿವರಿಸಿದರು.

Advertisement

ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ವಿಧಾನಸಭಾ ಉಸ್ತುವಾರಿಗಳಾದ ಅರುಣ್‌ ಮಾಚಯ್ಯ, ರಾಜ್‌ ಕುಮಾರ್‌ , ಐವನ್‌ ನೀಗ್ಲಿ, ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ನವೀನ್‌ ಡಿ’ಸೋಜಾ, ಎನ್‌.ಎಸ್‌. ಕರೀಂ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮತ್ತಿತರರು ಉಪಸ್ಥಿತರಿದ್ದರು.

ಖಂಡನಾ ನಿರ್ಣಯ
ಗುಜರಾತ್‌ನಲ್ಲಿ ಪ್ರವಾಹಪೀಡಿತ ಪ್ರದೇಶ ವೀಕ್ಷಣೆಗೆ ತೆರಳಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಕೃತ್ಯವನ್ನು ಹಾಗೂ ರಾಜ್ಯ ಇಂಧನ ಖಾತೆ ಸಚಿವ ಮತ್ತು ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮನೆಗೆ ನಡೆಸಿರುವ ರಾಜಕೀಯ ಪ್ರೇರಿತ ಐಟಿ ದಾಳಿಯನ್ನು ಬಲವಾಗಿ ಖಂಡಿಸಿ ಶನಿವಾರ ಜರಗಿದ ಜಿಲ್ಲಾ ಕಾಂಗ್ರೆಸ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಸ್ಥಾನಗಳನ್ನೂ ಕಾಂಗ್ರೆಸ್‌ ಪಕ್ಷ ಪಡೆದುಕೊಂಡಿತ್ತು. ಒಂದು ಸ್ಥಾನವನ್ನು ಅಲ್ಪ ಮತಗಳಿಂದ ಕಳೆದುಕೊಂಡಿದೆ. ಈ ಬಾರಿ ಜಿಲ್ಲೆಯ ಎಲ್ಲ 8 ಸ್ಥಾನಗಳನ್ನು ಗಳಿಸುವ ಸಂಕಲ್ಪ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಕಾರ್ಯ ಜಾರಿಯಲ್ಲಿದೆ. ಪ್ರತಿ 2 ವಿಧಾನಸಭಾ ಕ್ಷೇತ್ರಕ್ಕೆ ಓರ್ವರಂತೆ ಕೆಪಿಸಿಸಿ ಕಾರ್ಯದರ್ಶಿಗಳನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದ್ದು ಅವರು ಕ್ಷೇತ್ರದಲ್ಲಿ ತಿಂಗಳಲ್ಲಿ 15 ದಿನಗಳ ಕಾಲ ಇದ್ದು ಪಕ್ಷ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳುವರು. ಪ್ರತಿ ಬೂತ್‌ ಮಟ್ಟದಲ್ಲಿ 50 ಕಾರ್ಯಕರ್ತರು ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಮನೆಮನೆಗೆ ತೆರಳಿ ಮಾಹಿತಿ ನೀಡುವರು.
– ಯು.ಬಿ. ವೆಂಕಟೇಶ್‌

Advertisement

Udayavani is now on Telegram. Click here to join our channel and stay updated with the latest news.

Next