ಕೊಳ್ಳೇಗಾಲ: ನಗರಸಭೆ ನೌಕರರು ಸಾಮೂಹಿಕವಾಗಿ ವರ್ಗಾವಣೆ ಕೋರಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರಸಭೆ ವ್ಯವಸ್ಥಾಪಕ ನಿಂಗರಾಜು ಸೇರಿದಂತೆ ಒಟ್ಟು 10 ನೌಕರರು ಸಹಿ ಮಾಡಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಮಾ.24ರಂದು ಮನವಿ ಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಗರಸಭೆಯ ವ್ಯವಸ್ಥಾಪಕ ನಿಂಗರಾಜು, ಸಮುದಾಯಗಳ ಸಂಘಟನಾಕಾರಿ ಪರಿಶಿವ, ದ್ವಿತೀಯ ದರ್ಜೆಯ ಸಹಾಕರಾದ ರಾಜಲಕ್ಷ್ಮೀ, ಜಯಚಿತ್ರ, ಪ್ರದೀಪ್, ಅಕ್ಷಿತ, ಮಾಣಿಕ್ಯ ರಾಜ್, ಕರ ವಸೂಲಿಗಾರರಾದ ಆನಂದ್, ಕುಮಾರ್, ಸಿಬ್ಬಂದಿಗಳಾದ ಪ್ರಭಾಕರ್, ಶಿವಕುಮಾರ್ ಸಹಿ ಮಾಡಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.
ನಗರಸಭೆಗೆ ಚುನಾವಣೆ ಬಳಿಕ ಮೀಸಲಾತಿ ಪಟ್ಟಿ ಗೊಂದಲದಿಂದಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. 2 ವರ್ಷಗಳ ನಂತರ ಸರ್ಕಾರ ನಗರಸಭೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿತು. ಬಳಿಕ ಕಳೆದ 4 ತಿಂಗಳ ಹಿಂದೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರ ಪ್ರಥಮ ಸಭೆಯಲ್ಲಿ ಮತ್ತು ಇನ್ನಿತರ ಸಭೆಗಳಲ್ಲಿ ನಗರಸಭೆಯ ಸಿಬ್ಬಂದಿ ಸರಿಯಾಗಿ ಬೆಲೆ ನೀಡುತ್ತಿಲ್ಲ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಹೆಚ್ಚುವರಿ ಹೊಣೆ:
ಓರ್ವ ನೌಕರರಿಗೆ ಮೂರು ನಾಲ್ಕು ಖಾತೆಗಳನ್ನು, ಹಂಚಿದ್ದು ಎಲ್ಲಾ ಕೆಲಸಗಳನ್ನು ನಿರ್ವಹಣೆ ಮಾಡಲು ಕಷ್ಟಕರವಾಗಿದ್ದು, ಬೇರೆಡೆಗೆ ವರ್ಗಾವಣೆ ಮಾಡಿಕೊಡಬೇಕೆಂದು ಸಾಮೂಹಿಕವಾಗಿ ಸಹಿ ಮಾಡಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆಯೇ ಹೊರತು ಯಾವ ಸದಸ್ಯರ ವಿರುದ್ಧವೂ ನಾವು ದೂರು ಸಲ್ಲಿಸಿಲ್ಲ ಎಂದು ಸಿಬ್ಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ. ನೌಕರರ ಮನವಿಯನ್ನು ಜಿಲ್ಲಾಧಿಕಾರಿ ಯಾವ ರೀತಿ ಕ್ರಮ ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.