ಬಳ್ಳಾರಿ: ನಗರದ ಕಿರು ಮೃಗಾಲಯ ಇನ್ನು ಮುಂದೆ ರಾಶಿ, ನಕ್ಷತ್ರ ಆಧಾರಿತ ಕಿರು (ಟ್ರೀ ಪಾರ್ಕ್) ಸಸ್ಯವನವಾಗಲಿದೆ. ಕಳೆದ ಎರಡ್ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ‘ಟ್ರೀ ಪಾರ್ಕ್’ ನಿರ್ಮಾಣ ಕಾಮಗಾರಿಗೆ ಇದೀಗ ಕಾಲ ಕೂಡಿಬಂದಿದ್ದು, ಸುಮಾರು 3 ಕೋಟಿ ವೆಚ್ಚದಲ್ಲಿ 6 ತಿಂಗಳೊಳಗೆ ಪೂರ್ಣಗೊಳಿಸುವ ಸಂಕಲ್ಪ ಅರಣ್ಯ ಇಲಾಖೆ ಕೈಗೊಂಡಿದ್ದು ಶನಿವಾರದಿಂದಲೇ ಕೆಲಸ ಆರಂಭವಾಗಲಿದೆ.
ನಗರದ ರೇಡಿಯೋ ಪಾರ್ಕ್‌ನಲ್ಲಿ ಕಳೆದ ಮೂರ್‍ನಾಲ್ಕು ದಶಕಗಳಿಂದ ಇದ್ದ ‘ಕಿರು ಮೃಗಾಲಯ’ ನಗರದ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ವನ್ಯಮೃಗ, ಪ್ರಾಣಿ-ಪಕ್ಷಿ, ಜಿಂಕೆ, ಕೃಷ್ಣಮೃಗ, ಮೊಸಳೆ, ನವಿಲು, ಸರೀ ಸೃಪ ಸೇರಿ ಹಲವು ಉಭಯವಾಸಿ ಪ್ರಾಣಿಗಳನ್ನು ಪರಿಚಯ ಮಾಡಿಕೊಟ್ಟಿದೆ. ಆದರೆ, ಕಾಡಲ್ಲಿ ಬೇಟೆಯಾಡುವ ವನ್ಯಮೃಗಗಳನ್ನು ಚಿಕ್ಕ ಕೊಠಡಿಯಲ್ಲಿ ಕೂಡಿಟ್ಟು, ಪ್ರಾಣಿಗಳ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೆಲವರು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಕಿರು ಮೃಗಾಲಯದಲ್ಲಿದ್ದ ಪ್ರಾಣಿಗಳನ್ನು ಕಮಲಾಪುರ ಬಳಿ ನಿರ್ಮಿಸಲಾಗಿರುವ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸಲಾಯಿತು.
ಇದರಿಂದ ಪ್ರಾಣಿಗಳಿಲ್ಲದೇ ಖಾಲಿಯಾದ ಕಿರು ಮೃಗಾಲಯವನ್ನು ಸಸ್ಯವನ (ಟ್ರೀ ಪಾರ್ಕ್) ನಿರ್ಮಿಸುವುದಾಗಿ ಕಳೆದ ಎರಡ್ಮೂರು ವರ್ಷಗಳಿಂದ ಕೇಳಿಬರುತ್ತಿದೆಯಾದರೂ, ಈವರೆಗೂ ಅದು ಸಾಧ್ಯವಾಗಿಲ್ಲ. ಅಧಿಕಾರಿಗಳ ಮುತುವರ್ಜಿಯಿಂದ ಇದೀಗ ವೇಗ ಪಡೆದುಕೊಂಡಿರುವ ಕಾಮಗಾರಿ, ಬೆಂಗಳೂರಿನಿಂದ ತಂಡವೊಂದು ಶನಿವಾರ ಆಗಮಿಸಿ, ನೆಲಸಮತಟ್ಟು ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ರೇಡಿಯೋ ಪಾರ್ಕ್ ಖ್ಯಾತಿಯ ಕಿರು ಮೃಗಾಲಯ ಸ್ಥಳಾಂತರವಾದ ನಂತರ ಪಾಳು ಬಿದ್ದಿರುವ ಈ ಸ್ಥಳ ಇನ್ನು 6 ತಿಂಗಳಲ್ಲಿ ಅತಿ ವಿಶಿಷ್ಟವಾದ ಸಸ್ಯಗಳ ಪಾರ್ಕ್ ಆಗಿ ಪರಿವರ್ತನೆ ಆಗಲಿದೆ.
ರಾಶಿ, ನಕ್ಷತ್ರ ಹೆಸರಿನ ಮರಗಳು
ಈ ಪಾರ್ಕ್‌ನ ವಿಶೇಷತೆ ಅಂದರೆ ಒಂದೊಂದು ರಾಶಿಯವರಿಗೆ ಇಂತಹುದ್ದೇ ಮರ ಎಂಬ ನಂಬಿಕೆ ಇದೆಯಂತೆ. ಅಂಥ 12 ರಾಶಿಗೆ ಹೊಂದಿಕೊಳ್ಳುವ ಮರಗಳನ್ನು ಇಲ್ಲಿ ಬೆಳೆಸುವ ಉದ್ದೇಶವನ್ನು ಇಲಾಖೆ ಇಟ್ಟುಕೊಂಡಿದೆ. ಅದೇ ರೀತಿ 27 ನಕ್ಷತ್ರಗಳನ್ನು ಪ್ರತಿನಿಧಿಸುವ ಮರಗಳು ಸಹ ಇಲ್ಲಿ ಬೆಳೆದು ನಿಲ್ಲಲಿವೆ. ಯಾವುದೇ ನಕ್ಷತ್ರದವರು ತಮ್ಮ ನಕ್ಷತ್ರಕ್ಕೆ ಹೊಂದಿಕೊಳ್ಳುವ ಮರಗಳನ್ನು ಇಲ್ಲಿ ಬೆಳೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಮಗಾರಿ ಕೈಗೊಳ್ಳಲು ಈಗಾಗಲೆ ಅನುಮೋದನೆ ಸಿಕ್ಕಿದೆ. ಶನಿವಾರ ನೆಲ ಸಮತಟ್ಟು ಮಾಡುವ ತಂತ್ರಜ್ಞರು ಸ್ಥಳ ವೀಕ್ಷಣೆ ಮಾಡಲಿದ್ದಾರೆ. ಅದಾದ ನಂತರ ಅಲ್ಲಿರುವ ಹಳೆ ಕಟ್ಟಡ ನೆಲಸಮಗೊಳಿಸಿ, ಅನಪೇಕ್ಷಿತ ವಸ್ತುಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಆರು ತಿಂಗಳಲ್ಲಿ ವಿಶೇಷವಾದ ಉದ್ಯಾನವನ ಮಕ್ಕಳು, ವಯಸ್ಕರು, ಹಿರಿಯರು ಎಂಬ ಬೇಧ ಭಾವ ಇಲ್ಲದೇ ಎಲ್ಲರೂ ಬಂದು ನೋಡಿಕೊಂಡು, ಕೆಲಹೊತ್ತು ಕಾಲ ಕಳೆಯುವಂತಹ ಸ್ಥಳವಾಗಲಿದೆ.
ಮಕ್ಕಳಿಗೆ ಇಷ್ಟವಾಗಿದ್ದ ಸ್ಥಳ
ಬಳ್ಳಾರಿ ಶತಮಾನಗಳ ಹಿನ್ನೆಲೆ ಹೊಂದಿದ್ದರೂ ಹೇಳಿಕೊಳ್ಳುವಂಥ ಪ್ರವಾಸಿ ತಾಣಗಳು ಒಂದೂ ಇಲ್ಲ. ಬಳ್ಳಾರಿ (ಬೆಟ್ಟ) ಕೋಟೆ ಇದ್ದರೂ, ಮೂಲಸೌಲಭ್ಯಗಳ ಕೊರತೆಯಿಂದ ಯಾರೂ ಹೋಗಲ್ಲ. ಹಾಗಾಗಿ ರಜಾದಿನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಲು, ಮಕ್ಕಳಿಗೆ ವನ್ಯ ಪ್ರಾಣಿಗಳ ಬಗ್ಗೆ ಪರಿಚಯಿಸಲು ಕಿರು ಮೃಗಾಲಯ ಅನುಕೂಲವಾಗುತ್ತಿತ್ತು. ಇದೀಗ ಅದನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸುವ ಉದ್ದೇಶ ಅರಣ್ಯ ಇಲಾಖೆ ಹೊಂದಿದ್ದು, ಕಾರ್ಯರೂಪಕ್ಕೆ ಬರಲಿದೆ.
ಕಿರು ಮೃಗಾಲಯ ಪ್ರದೇಶದಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸಲಾಗುವುದು. 3 ಕೋಟಿ ರೂ. ವೆಚ್ಚದಲ್ಲಿ ರಾಶಿ, ನಕ್ಷತ್ರಗಳ ಹೆಸರಲ್ಲಿ ಮರಗಳನ್ನು ಬೆಳೆಸಲಾಗುವುದು. ಈ ಮೂಲಕ ಮರಗಳು, ಅರಣ್ಯ ಬಗ್ಗೆ ಜನರಿಗೆ ಆಸಕ್ತಿ ಮೂಡಿಸಲಾಗುವುದು. ಜತೆಗೆ ಮಕ್ಕಳಿಗೂ ಆಟವಾಡಲು ಆಟಿಕೆ ಸಾಮಾನುಗಳನ್ನು ಅಳವಡಿಸಲಾಗುವುದು. 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಸಂದೀಪ್ ಸೂರ್ಯವಂಶಿ, ಅರಣ್ಯ ಉಪಸಂರಕ್ಷಣಾಧಿಕಾರಿ, ಬಳ್ಳಾರಿ
-ವೆಂಕೋಬಿ ಸಂಗನಕಲ್ಲು