ಶಹಾಬಾದ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ವತಿಯಿಂದ ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್‌ನಿಂದ ಮೃತಪಟ್ಟ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಗುಣಮುಖರಾದವರ ವೈದ್ಯಕೀಯ ವೆಚ್ಚ ಧರಿಸಬೇಕು. ಮದುವೆ ಸಹಾಯಧನ ನೀಡಲು ವಿಳಂಬ ಧೋರಣೆ ಅನುಸರಿಸಬಾರದು. ಸಹಜ ಮರಣ ಹೊಂದಿದ ಫಲಾನುಭವಿಗೆ ಒಟ್ಟು 54 ಸಾವಿರ ರೂ. ನೀಡಲಾಗುತ್ತಿದ್ದು, ಈ ಮೊತ್ತವನ್ನು 5ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಪಘಾತದಲ್ಲಿ ಮರಣ ಹೊಂದಿದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು ಈ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಮಹಿಳಾ ಕಾರ್ಮಿಕರಿಗೆ ನೀಡಲಾಗುತ್ತಿರುವ ಹೆರಿಗೆ ಭತ್ಯೆಯನ್ನು ಪುರುಷ ಕಾರ್ಮಿಕ ಪತ್ನಿಯರಿಗೂ ನೀಡಬೇಕು. ಸ್ವಂತ ಸೂರು ಹೊಂದಲು ಐದು ಲಕ್ಷ ರೂ. ಸಹಾಯದನ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಾರ್ಮಿಕ ಸಂಘಗಳ ಉದ್ಯೋಗ ಪ್ರಮಾಣ ಪತ್ರಗಳಲ್ಲಿ ವಿನಾ ಕಾರಣ ತಪ್ಪುಗಳನ್ನು ಹುಡುಕಿ ಪ್ರಮಾಣ ಪತ್ರ ತಿರಸ್ಕರಿಸುತ್ತಾರೆ. ಆದರೆ ದಲ್ಲಾಳಿಗಳು ಬಂದರೆ ಅದೇ ಅರ್ಜಿಯನ್ನು ಅಧಿಕಾರಿಗಳು ಮಾಡಿ ಕೊಡುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ 11 ತಾಲೂಕಾಗಳಿಗೆ ಕಾರ್ಮಿಕ ನಿರೀಕ್ಷಕರನ್ನು ನೇಮಕ ಮಾಡಬೇಕು. ಪ್ರತಿ ತಿಂಗಳು ಕಾರ್ಮಿಕ ಸಂಘಗಳ ಸಭೆ ನಡೆಸಬೇಕು. ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ರಾಮು ಜಾಧವ, ಉಪಾಧ್ಯಕ್ಷ ಲಕ್ಷ್ಮೀಕಾಂತ ಸಾಗರ, ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಖಜಾಂಚಿ ಪ್ರಕಾಶ ಕುಸಾಳೆ, ಸಹ ಕಾರ್ಯದರ್ಶಿ ನೀಲು ಚವ್ಹಾಣ, ಹಾಜಪ್ಪ, ಶಿವಶರಣಪ್ಪ ಅರುಣ ನಾಟೇಕಾರ ಹಾಗೂ ಮತ್ತಿತರ ಕಾರ್ಮಿಕರು ಪಾಲ್ಗೊಂಡಿದ್ದರು.