ಮಲ್ಪೆ: ಹಡಿಲು ಭೂಮಿಯನ್ನು ಹಸನುಗೊಳಿಸಬೇಕು, ಕೃಷಿಯತ್ತ ಯುವ ಸಮುದಾಯವನ್ನು ಆಕರ್ಷಿಸಬೇಕೆಂಬ ಸದುದ್ದೇಶದಿಂದ ನಿಟ್ಟೂರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಪರ್ವದ ಅಂಗವಾಗಿ ಸಮಿತಿಯು ನಾಟಿ ಕಾರ್ಯ ತೊಡಗಿಕೊಂಡಿದೆ.
ಈ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆಯಿಂದ ಪುತ್ತೂರು ಮುಂಡ್ರಪಾಡಿ ದೇವಸ್ಥಾನದ ಸಮೀಪದ ವಿಶಾಲವಾದ ಗದ್ದೆಯಲ್ಲಿ ಯಂತ್ರ ಮತ್ತು ಕೈಯಲ್ಲಿ ನಡೆವ ಮೂಲಕ ಒಟ್ಟು 11ಎಕ್ರೆ ಗದ್ದೆಯನ್ನು ಸಾಗುವಳಿ ಮಾಡುವ ಮೂಲಕ ಎಲ್ಲರಿಗೆ ಮಾದರಿಯಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೆ ಗದ್ದೆಯಲ್ಲಿ ಜನರದ್ದೆ ಜಂಗುಳಿ, ಟಿಲ್ಲರ್‌ಗಳು ಉಳುಮೆ ಮಾಡುತ್ತಿದ್ದರೆ, ಗದ್ದೆಯ ಉದ್ದಕ್ಕೂ ಮಹಿಳೆಯ ನಾಟಿ ಮಾಡುವ ದೃಶ್ಯ ಹಲವಾರು ವರ್ಷದ ಹಿಂದಿನ ನೆನಪನ್ನು ಮೆಲುಕು ಹಾಕುವಂತಿತ್ತು. ಸಮತಟ್ಟು ಮಾಡುವುದು, ನೇಜಿ ತಂದು ಕೊಡುವುದು, ನೇಜಿ ನೆಡುವುದು, ರಸಗೊಬ್ಬರ ಬಿಕ್ಕುವುದು ಹೀಗೆ ಒಂದೊಂದು ಕೆಲಸದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಕೆಲವರಿಗೆ ಕೆಸರುಗದ್ದೆಯಲ್ಲಿ ಕೆಲಸ ಮಾಡುವ ಅವಕಾಶವೇ ಇಲ್ಲದ ಈ ದಿನಗಳಲ್ಲಿ ಮೈ ಕೆಸರು ಮಾಡಿಕೊಂಡು ಸಂಭ್ರಮಪಟ್ಟರು. ನಿಟ್ಟೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಗಳು ಶಾಲಾ ಮಕ್ಕಳ ಪೋಷಕರು ಮತ್ತು ಗ್ರಾಮದ ಜನರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗಿಯಾದರು.
ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ರಹ್ಮಾವರ ಕೃಷಿ ಕೇಂದ್ರದ ಕೃಷಿ ವಿಜ್ಞಾನಿ ಶಂಕರ್ ಉದ್ಯಮಿ ವಿಶ್ವನಾಥ ಶೆಣೈ, ಶಾಲಾ ಆಡಳಿತ ಸಮಿತಿ ಎಸ್.ವಿ. ಭಟ್, ವೇಣುಗೋಪಾಲ ಆಚಾರ್ಯ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್‌ಚಂದ್ರಧರ್, ಕಾರ್ಯದರ್ಶಿ ಪ್ರದೀಪ್ ಜೋಗಿ, ಪುತ್ತೂರು ವಲಯದ ಕೃಷಿ ಕ್ರಿಯಾ ಸಮಿತಿಯ ಸಂಚಾಲಕರಾದ ದಿನೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಪಿ. ಶಂಕರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರ ಮುರಲಿ ಕಡೆಕಾರ್,ಹಡೀಲು ಗದ್ದೆಯನ್ನು ಹಸಿರು ಮಾಡುವ ನಮ್ಮ ಉದೇªಶ, ನಿಟ್ಟೂರು ಶಾಲೆಯ ಸುವರ್ಣ ಸಂಭ್ರಮದ ಪ್ರಯುಕ್ತವಾಗಿ ಶಾಲೆಯ ಸುತ್ತಮುತ್ತಲ ಕೆಲವು ಊರು ಗಳಾದ ಪುತ್ತೂರು, ಕರಂಬಳ್ಳಿ ಪೆರಂಪಳ್ಳಿ, ಕಕ್ಕುಂಜೆ ಪ್ರದೇಶದ ಸುಮಾರು 50ಎಕ್ರೆ ಹಡಿಲು ಭೂಮಿಯನ್ನು ನಾಟಿ ಮಾಡುವ ಕೆಲಸ ನಡೆಯುತ್ತಿದೆ ಎಂದರು. ಕೃಷ್ಣ ಮೂರ್ತಿ ಭಟ್ ವಂದಿಸಿದರು. ಭಾಗವಹಿಸಿದ ಎಲ್ಲರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.