ಮಸ್ಕಿ: ಎರಡನೇ ಶ್ರೀಶೈಲ ಎಂದೇ ಖ್ಯಾತಿ ಇರುವ, ಈ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಥೋತ್ಸವವು ಬುಧವಾರ ಸಾವಿರಾರು ಭಕ್ತರ ಜಯ ಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿನ ಈಶ್ವರ ಲಿಂಗಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ರಥೋತ್ಸವದ ಕಳಸ ಪ್ರತಿಷ್ಠಾಪನೆ ನಡೆಯಿತು. ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿದ್ದರು. ದೀಡ್ ನಮಸ್ಕಾರ, ರಥಕ್ಕೆ ಎಣ್ಣೆ ಹಾಕುವ ಮೂಲಕ ಅನೇಕ ಭಕ್ತರು ತಮ್ಮ ಅರಿಕೆ ಸಲ್ಲಿಸಿದರು. ಸಂಜೆ 4 ಗಂಟೆಗೆ ಮಲ್ಲಿಕಾರ್ಜುನನ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯನ್ನು ರಥದ ಸುತ್ತ 5 ಬಾರಿ ಪ್ರಧಕ್ಷಣೆ ಹಾಕಿಸಿದ ನಂತರ ಪಲ್ಲಕ್ಲಿಯಲ್ಲಿನ ಉತ್ಸವ ಮೂರ್ತಿಯನ್ನು ಭಕ್ತರ ಜಯಘೋಷ ಹಾಗೂ ಹರ್ಷೋದ್ಧಾರಗಳ ನಡುವೆ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಆರಂಭವಾಯಿತು. ಗಿರಿಯ ಮುಖಂಡ ವೀರನಗೌಡ ಪಾಟೀಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಜಿ.ಪಂ. ಮಾಜಿ ಸದಸ್ಯರಾದ ಮಹಾದೇವಪ್ಪಗೌಡ ಪಾಟೀಲ್, ಸಿದ್ದನಗೌಡ ತುರುವಿಹಾಳ, ಹಿರಿಯರಾದ ಪ್ರಕಾಶ ಶೇಠ್ ದಾರಿವಾಲ, ಬಸವಂತರಾಯ ಕುರಿ, ಡಾ.ಬಿ.ಎಚ್.ದಿವಟರ್ ಸೇರಿದಂತೆ ಹಲವು ಪ್ರಮುಖ ಇದ್ದರು.
ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥದ ಮಿಣಿ ಹಿಡಿದು ಎಳೆಯತೊಡಗಿದರು. ದೈವದಕಟ್ಟೆಯ ಪಾದಗಟ್ಟೆವರೆಗೆ ರಥ ಎಳೆದು ಪುನಃ ದೇವಸ್ಥಾನಕ್ಕೆ ತರಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಪಟ್ಟಣದ ಭೋವಿ (ವಡ್ಡರ) ಸಮಾಜದ ಬಂಧುಗಳು ಮಡಿವಂತಿಕೆಯಿಂದ ರಥದ ಚಕ್ರಗಳಿಗೆ ಮಿಣಿ ಹಾಕುವ ಮೂಲಕ ಗಮನ ಸೆಳೆದರು.
ರಥೋತ್ಸವ ಹಿನ್ನೆಲೆಯಲ್ಲಿ ಸರ್ಕಲ್ ಇನ್ ಸ್ಪೆಕರ್ ಸಂಜೀವ ಕುಮಾರ, ಸಬ್ ಇನ್ ಸ್ಪೆಕ್ಟರ್ ಸಿದ್ಧರಾಮ ಬಿದರಾಣಿ ನೇತೃತ್ವದಲ್ಲಿ ಬೀಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.