Advertisement

ಸ್ಕೂಲ್‌ ಬಸ್‌ ಅಲ್ಲ ಸ್ಕೂಲೇ ಬಸ್ಸು!

06:55 AM Apr 06, 2018 | Team Udayavani |

ಕುಂದಾಪುರ: ನಾವುಂದ ಪಂಚಾಯತ್‌ ಕಚೇರಿ ಬಳಿ ಹಿಂದೆ ಸರಕಾರಿ ಶಾಲೆ ಇತ್ತು. ಈಗ ಅಲ್ಲಿ ಬಸ್ಸೊಂದು ನಿಂತಿದೆ.. ಅರೆ ಇದೇನಿದು.. ಎಂದು ಭಾವಿಸಿದಿರಾ..? ಶಾಲೆ ಎಲ್ಲಿ ಹೋಯಿತು ಎಂಬ ಅಚ್ಚರಿಯೇ? ಇದು ಸ್ಕೂಲ್‌ ಬಸ್‌ ಅಲ್ಲ ಸ್ಕೂಲೇ ಬಸ್ಸು. ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಥರಾವರಿ ಪ್ರಯತ್ನಗಳು ನಡೆಯುತ್ತಿರುವಂತೆಯೇ ನಾವುಂದ ಮಸ್ಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಸ್ಸಿನಂತೆ ಬಣ್ಣ ಬಳಿಯಲಾಗುತ್ತಿದೆ. ಈ ಮೊದಲು ನಾಗೂರು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ (ಹಿಂದೂಸ್ತಾನಿ) ಶಾಲೆ ರೈಲಿನ ಮಾದರಿಯಲ್ಲಿ ಕಟ್ಟಡಕ್ಕೆ ಬಣ್ಣ ಬಳಿಯಲಾಗಿತ್ತು. ಅದೇ ರೀತಿ ಚಿಕ್ಕಮಗಳೂರಿನ ಕೊಪ್ಪದ ಸರಕಾರಿ ಶಾಲೆಯನ್ನು ರೈಲಾಗಿ ಸಲಾಗಿತ್ತು. 
 
ಬಸ್‌ ಹಾಗೂ ಕೃಷಿ
ಶಾಲೆ ಕಟ್ಟಡವನ್ನು ಸಂಪೂರ್ಣ ಬಸ್‌ ಮಾದರಿಯಲ್ಲಿ ಚಿತ್ರಿಸಲಾಗುತ್ತಿದೆ. ಕಿಟಕಿಗಳು, ಬಾಗಿಲು, ಚಕ್ರ ಹೀಗೆ 3ಡಿ ಮಾದರಿಯಲ್ಲಿವೆ. ಚಾಲಕ, ಶಾಲಾ ಮಕ್ಕಳನ್ನು ಕೂಡಾ ಚಿತ್ರಿಸಲಾಗಿದ್ದು ಬಸ್‌ ನೋಂದಣಿ ಸಂಖ್ಯೆ ಹಾಕುವ ನಂಬರ್‌ ಪ್ಲೇಟಿನಲ್ಲಿ ಶಾಲಾ ಡಯಾಸ್‌ ನಂಬರ್‌ ಹಾಕಲಾಗಿದೆ. ಇದರೊಂದಿಗೆ ಸರ್ವ ಶಿಕ್ಷಣ ಅಭಿಯಾನ ವತಿಯಿಂದ ನಿರ್ಮಾಣವಾದ ಕಟ್ಟಡದ ಗೋಡೆಗಳಲ್ಲಿ ಕರಾವಳಿ ಪ್ರಾಂತ್ಯದ ಕೃಷಿ ಚಟುವಟಿಕೆಗಳ ಮಾಹಿತಿ ನೀಡುವ ಉಳುಮೆ, ಬಿತ್ತನೆ, ಭತ್ತ ನೆಡುವ ಚಿತ್ರ, ಬಯಲುಸೀಮೆಯ ಕೃಷಿ ಚಟುವಟಿಕೆಗಳ ಚಿತ್ರಗಳಿವೆ. 
 
ಕಲಾಶಿಕ್ಷಕರೇ ಕಲಾವಿದರು
ಶಾಲೆಗೆ ಬಸ್ಸಿನ ಬಣ್ಣ ಬಳಿಯುವವರು ಕಲಾಶಿಕ್ಷಕರೇ. ಉಪ್ಪುಂದ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಕಾಳಿದಾಸ ಬಿ. ಬಡಿಗೇರ್‌ ಹಾಗೂ ನಾವುಂದ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ಕಲಾಶಿಕ್ಷಕ ಈರಯ್ಯ ಹಿರೇಮಠ್ ಅವರು ಪ್ರಧಾನ ಚಿತ್ರಕಾರರು. ಇವರಿಗೆ ನಾವುಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶ್ರೀಕಾಂತ್‌ ಉಪ್ರಳ್ಳಿ ಹಾಗೂ ಹಟ್ಟಿಯಂಗಡಿಯ 10ನೇ ತರಗತಿ ವಿದ್ಯಾರ್ಥಿ ಸಿದ್ದಲಿಂಗಯ್ಯ ಸಹಾಯ ಮಾಡುತ್ತಿದ್ದಾರೆ. ಬಣ್ಣಗಾರಿಕೆಗೆ 10 ದಿನಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ. 

Advertisement

ಕಲಾವಿದ ಬಡಿಗೇರ್‌ 
ಯಕ್ಷಗಾನ ಪ್ರಿಯ ಕೆ.ಬಿ.ಬಡಿಗೇರ್‌ ಅವರು ವಂಡ್ಸೆ ಶಾಲೆಯಲ್ಲಿದ್ದಾಗ ಮಕ್ಕಳಿಗೆ ಕಲಿಸಲೆಂದು ಯಕ್ಷಭಾರತಿ ಕಲಾಕೇಂದ್ರ ಆರಂಭಿಸಿದರು. ಸಂಗೀತ ಶಿಕ್ಷಕರನ್ನು ನೇಮಿಸಿ, ಸಂಗೀತ, ಕುಂಚ, ನೃತ್ಯ ಕಲಿಸುತ್ತಿದ್ದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ತಂಡದಲ್ಲಿ ಯಕ್ಷ ಗಾನ ನಾಟ್ಯ ಕುಂಚ ವೈಭವದಲ್ಲಿ ಭಾಗವಹಿಸಿ ಅದರಲ್ಲಿ ದೊರೆತ ಗೌರವ ಸಂಭಾವನೆಯನ್ನು ಯಕ್ಷಭಾರತಿಗೆ ನೀಡುವ ಪರಿಪಾಠ ಆರಂಭಿಸಿ ಈಗಲೂ ಮುಂದುವರಿಸುತ್ತಿದ್ದಾರೆ. ಪತ್ರಿಕೆಗಳಿಗೆ ವ್ಯಂಗ್ಯಚಿತ್ರ, ವ್ಯಕ್ತಿಚಿತ್ರ ಬರೆಯುವ ಇವರು ಬಿಡುವಿನ ಅವಧಿಯಲ್ಲಿ ಮಕ್ಕಳನ್ನು ಕೂಡಿಕೊಂಡು ಕಲಾ ಹಂಚೋಣ ನಡೆಸುತ್ತಿದ್ದಾರೆ.  

ಕಲಿಕಾಪೂರಕ ವಾತಾವರಣ
21 ವರ್ಷದ ಈ ಶಾಲೆಯಲ್ಲಿ 5 ತರಗತಿಗಳಲ್ಲಿ 39 ವಿದ್ಯಾರ್ಥಿಗಳಿದ್ದಾರೆ. ಸಹಶಿಕ್ಷಕಿ ಸುಲೇಖಾ ಹಾಗೂ ನಮ್ಮ ಒತ್ತಾಸೆಯಿಂದ ಸಮಾಜದವರ ಸಹಕಾರದಲ್ಲಿ ಕುಂಚಗಾರಿಕೆ ನಡೆಯುತ್ತಿದೆ. ಸೌರಮಂಡಲ, ಕೃಷಿ ಸೇರಿದಂತೆ ಮಕ್ಕಳಿಗೆ ಕಲಿಕಾಪೂರಕ ವಾತಾವರಣಕ್ಕಾಗಿ ಇದನ್ನು ಮಾಡುತ್ತಿದ್ದೇವೆ. 
– ಗಣಪ ಬಿಲ್ಲವ, ಮುಖ್ಯೋಪಾಧ್ಯಾಯರು 

ಪ್ರಾಯೋಗಿಕ ಕಲಿಕೆ
ನಮ್ಮೊಂದಿಗಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ  ಕಲಿಕೆಗೆ ಉತ್ತಮ ಅವಕಾಶ ದೊರೆತಂತಾಗಿದೆ. ಇಲ್ಲಿನ ಮಕ್ಕಳಿಗೂ ಚಿತ್ರಗಳು ಕಲಿಕೆಗೆ ಪೂರಕವಾಗಿವೆ. ಇದನ್ನು ಕಲಾಪ್ರೀತಿಯಿಂದ ಮಾಡುತ್ತಿದ್ದು, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ರೈಲು ಮಾದರಿ ಶಾಲಾ ಕಟ್ಟಡ ನೋಡಿ ಮುಖ್ಯಶಿಕ್ಷಕರು ಬೇಡಿಕೆ ಇಟ್ಟಿದ್ದರು. ಆದರೆ ಕಟ್ಟಡ ಸಣ್ಣದಾದ್ದರಿಂದ ಬಸ್ಸಿನ ರಚನೆಗೆ ಮುಂದಾದೆವು.
 – ಕೆ.ಬಿ.ಬಡಿಗೇರ್‌, ಕಲಾಶಿಕ್ಷಕರು

ಅಮ್ಮನ ಬಳಿ ಹಠ ಹಿಡಿದಿತ್ತು 
ಶಾಲೆ ಸಮೀಪ ವಠಾರವನ್ನು ನಮ್ಮ ತಂಡ ಶುಚಿಗೊಳಿಸಿ ಕಲಿಕಾ ವಾತಾವರಣ ನಿರ್ಮಿಸಿದೆ. ಸರಕಾರಿ ಶಾಲೆಗೆ ಇನ್ನಷ್ಟು ಮಕ್ಕಳ ಸೇರ್ಪಡೆಯಾಗಬೇಕು. ಇಲ್ಲಿನ ಬಸ್ಸಿನ ಚಿತ್ರ ನೋಡಿ ಮಗುವೊಂದು ನಮ್ಮ ಎದುರೇ “ನಾನು ಇದೇ ಶಾಲೆಗೆ ಸೇರುತ್ತೇನೆ’ ಎಂದು ಅಮ್ಮನ ಬಳಿ ಹಠ ಹಿಡಿದಿತ್ತು.  
– ಗಿರೀಶ್‌ ಎಸ್‌. ಖಾರ್ವಿ, ಸ್ಥಳೀಯರು

Advertisement

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next