Advertisement

ಘೋಷಣೆಗೆ ಸೀಮಿತವಾಯ್ತೇ ಆಸರೆ?ಉಪಚುನಾವಣೆ ಹೊತ್ತಲ್ಲಿ ಮತ್ತೆ ಮುನ್ನೆಲೆಗೆ

04:48 PM Jan 12, 2021 | Team Udayavani |

ಮಸ್ಕಿ: ವಸತಿ ಯೋಜನೆಯಲ್ಲಿ ನಿರ್ಮಿಸಿಕೊಂಡ ಮನೆಗಳ ಬಾಕಿ ಮೊತ್ತವೇ 8 ಕೋಟಿ ರೂ. ದಾಟಿದೆ. ಇದರ ನಡುವೆಯೂ ಸರಕಾರ ಮಸ್ಕಿ ಕ್ಷೇತ್ರಕ್ಕೆ ಹೊಸ ಮನೆಗಳ ಘೋಷಣೆ ಮಾಡಿತ್ತು. ಆದರೆ ಇವು ಎರಡೂ ಕ್ಷೇತ್ರದ ಫಲಾನುಭವಿಗಳಿಗೆ ಇದುವರೆಗೂ ದಕ್ಕಿಲ್ಲ. ಒಂದು ತಿಂಗಳ ಹಿಂದೆ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಲಿದೆ ಎನ್ನುವ ಮುನ್ಸೂಚನೆ ಅರಿತು ಸ್ವತಃ ವಸತಿ ಖಾತೆ ಮಂತ್ರಿ ವಿ.ಸೋಮಣ್ಣರೇ ಮಸ್ಕಿ ಪಟ್ಟಣಕ್ಕೆ ಆಗಮಿಸಿ ಘೋಷಣೆ
ಮಾಡಿದ್ದರು. ವಿವಿಧ ವಸತಿ ಯೋಜನೆಯಲ್ಲಿ ನಿರ್ಮಿಸಿಕೊಂಡ ಮನೆಗಳ ಬಾಕಿ ಮೊತ್ತ ಬಿಡುಗಡೆ ಜತೆಗೆ ಮಸ್ಕಿ ಮತ್ತು ಬಸವ ಕಲ್ಯಾಣಕ್ಕೆ ತಲಾ 7500ರಂತೆ 15,000 ಮನೆಗಳನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದರು.

Advertisement

ಸಚಿವರ ಹೇಳಿಕೆ ಬೆನ್ನಲ್ಲೇ ರಾಜೀವ್‌ಗಾಂಧಿ  ವಸತಿ ನಿಗಮ ಆದೇಶ ಹೊರಡಿಸಿ ವಿಶೇಷ ಪ್ರಕರಣದಡಿ ಮಸ್ಕಿ ಮತ್ತು ಬಸವಕಲ್ಯಾಣಕ್ಕೆ ವಿವಿಧ ಯೋಜನೆಗಳಲ್ಲಿ ತಲಾ 7500 ಮನೆಗಳನ್ನು ಹಂಚಿಕೆ ಮಾಡಿತು. ಆದರೆ ಗ್ರಾಪಂ ಚುನಾವಣೆ ಘೋಷಣೆಯಾಗಿದ್ದರಿಂದ ನೀತಿ ಸಂಹಿತೆ ಜಾರಿಯಾಗಿ ಈ ಮನೆಗಳ ಹಂಚಿಕೆಗೆ ಬ್ರೇಕ್‌ ಬಿದ್ದಿತ್ತು. ಈಗ ಚುನಾವಣೆ ಮುಗಿದಿದೆ. ಆದರೆ ಈ ಬಗ್ಗೆ ಸರಕಾರ, ರಾಜೀವ ಗಾಂಧಿ ವಸತಿ ನಿಗಮ ಇದುವರೆಗೂ ಯಾವುದೇ ಪ್ರಗತಿ ನಡೆಸಿಲ್ಲ. ಕೇವಲ ಮನೆಗಳನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಆದೇಶ ಬಿಟ್ಟರೆ ಇದುವರೆಗೂ ಬೇರೆ ಪತ್ರ ವ್ಯವಹಾರ ನಡೆದಿಲ್ಲ.

ಇಲ್ಲಿ 8 ಕೋಟಿ ರೂ. ಬಾಕಿ: ಸಚಿವರು ಘೋಷಣೆ ಮಾಡಿದ ಹೊಸ ಮನೆಗಳ ಕಥೆ ಹೀಗಾದರೆ, ಕಳೆದ 2015-16ರಿಂದ 2017-18ರವರೆಗೂ ಬಸವ ವಸತಿ, ಅಂಬೇಡ್ಕರ್‌ ನಿವಾಸ, ಬಸವ ವಸತಿ ಹೆಚ್ಚುವರಿ ಯೋಜನೆ ಸೇರಿ ಇತರೆ ಯೋಜನೆಗಳಲ್ಲಿ ನಿರ್ಮಿಸಿಕೊಂಡ ಮನೆಗಳ ಮೊತ್ತವೇ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಇಂತಹ ಮನೆ ನಿರ್ಮಿಸಿಕೊಂಡು ಸಹಾಯಧನಕ್ಕಾಗಿ  ಅಲೆದಾಡುತ್ತಿರುವ ಫಲಾನುಭವಿಗಳ ಬಾಕಿ ಮೊತ್ತ ಡಿಸೆಂಬರ್‌ ಮೊದಲ ವಾರದಲ್ಲಿ 9,74,48,427 ರೂ. ಇತ್ತು. ಆದರೆ ಸಚಿವರು ಮಸ್ಕಿಗೆ ಭೇಟಿ ನೀಡಿ ತೆರಳಿದ ಬಳಿಕ ಬಾಕಿ ಮೊತ್ತದಲ್ಲಿ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆಯಾಗಿತ್ತು. ಆದರೆ ಉಳಿದ ಮೊತ್ತ ಇದುವರೆಗೂ ಬಿಡುಗಡೆಯಾಗಿಲ್ಲ. ಹೀಗಾಗಿ ಮಸ್ಕಿ ಕ್ಷೇತ್ರದ ಒಟ್ಟು 27 ಗ್ರಾಪಂಗಳ ವಸತಿ ಯೋಜನೆ ಬಾಕಿ ಮೊತ್ತ 8.74 ಕೋಟಿ ರೂ. ಇನ್ನು ಬಾಕಿ ಉಳಿದಿದೆ.

ತಾಂತ್ರಿಕ ನೆಪ: ಕಳೆದ ನಾಲ್ಕೈದು ವರ್ಷಗಳಿಂದ ನಿರ್ಮಿಸಿಕೊಂಡ ಮನೆಗಳ ಬಾಕಿ ಮೊತ್ತ ಪಾವತಿಗೆ ತಾಂತ್ರಿಕ ಅಡಚಣೆ ಉಂಟಾಗಿದೆ ಎನ್ನುವ ನೆಪ
ರಾಜೀವ ಗಾಂಧಿ  ವಸತಿ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ. ಆಧಾರ್‌ ಕಾರ್ಡ್‌ ಲಿಂಕ್‌ ಇರದೇ ಇರುವುದು, ಫಲಾನುಭವಿಗಳ ಬ್ಯಾಂಕ್‌ ಖಾತೆ ಬದಲಾವಣೆ ಸೇರಿ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದೆ. ಈ ಸಮಸ್ಯೆ ಪಟ್ಟಿ ಮಾಡಿ ಸರಿ ಮಾಡಿ ವರದಿ ನೀಡಲು ಆಯಾ ಪಂಚಾಯಿತಿ ಅಧಿಕಾರಿಗಳಿಗೆ ನಿಗಮ ಸೂಚಿಸಿದೆ. ಆದರೆ ಇದುವರೆಗೂ ಪಿಡಿಒಗಳು ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಮತ್ತೆ ಅಲೆದಾಟವೇ ಗತಿಯಾಗಿದೆ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next