Advertisement

ಮತ್ತೆ ಮಾಸ್ಕ್ ಹೈಡ್ರಾಮಾ!

10:21 AM Dec 06, 2017 | Team Udayavani |

ಹೊಸದಿಲ್ಲಿ: ಭಾರತ ವಿರುದ್ಧದ ಟೆಸ್ಟ್‌ ಪಂದ್ಯದ ಎರಡನೇ ದಿನ ವಾಯುಮಾಲಿನ್ಯ ನೆಪವೊಡ್ಡಿ ಮಾಸ್ಕ್ ಧರಿಸಿ ಕ್ರೀಡಾಂಗಣಕ್ಕೆ ಇಳಿದಿದ್ದ ಲಂಕಾ ಆಟಗಾರರು ಸತತ ಮೂರನೇ ದಿನವೂ ಮಾಸ್ಕ್ ಧರಿಸಿಯೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸೋಲಿನ ಭಯದಲ್ಲಿರುವ ಲಂಕನ್ನರ ಹೈಡ್ರಾಮಾ ಎಂದು ಮೂದಲಿಸಿದ್ದಾರೆ.

Advertisement

4ನೇ ದಿನದ ಆಟದ ವೇಳೆ ಲಂಕಾ ವೇಗಿ ಸುರಂಗ ಲಕ್ಮಲ್‌ ಕ್ರೀಡಾಂಗಣದಲ್ಲೇ ವಾಂತಿ ಮಾಡಿಕೊಂಡರು. ಕೂಡಲೇ ಚಂಡಿಮಾಲ್‌ ಹಾಗೂ ತಂಡದ ವೈದ್ಯಕೀಯ ಸಿಬಂದಿ ವರ್ಗ ಆಟಗಾರನ ನೆರವಿಗೆ ಧಾವಿಸಿದರು. 

ರವಿವಾರದ ಆಟದ ವೇಳೆಯೂ ಲಕ್ಮಲ್‌ ಅನಾರೋಗ್ಯಕ್ಕೆ ಈಡಾಗಿದ್ದರು. ರವಿವಾರ ಅನಾರೋಗ್ಯದ ನೆಪವೊಡ್ಡಿ ಲಹಿರು ಗಾಮಗೆ ಕೂಡ ಅಂಗಳದಿಂದ ಹೊರನಡೆದಿದ್ದರು. ಈ ವೇಳೆ ಲಂಕಾ ಆಟಗಾರರು ವಾಯುಮಾಲಿನ್ಯದ ಕಾರಣ ನೀಡಿದ್ದರು. ಅಂಪಾಯರ್‌ಗೂ ಸಂದೇಶವನ್ನು ರವಾನಿಸಿ ಮನದಟ್ಟು ಮಾಡುವ ಪ್ರಯತ್ನ ನಡೆಸಿದ್ದರು. ಇದು ವಿಫ‌ಲವಾಗಿತ್ತು. ಒಟ್ಟಾರೆ 28 ನಿಮಿಷ ಪಂದ್ಯಕ್ಕೆ ಅಡಚಣೆಯಾಗಿತ್ತು.

ಆದರೆ ಭಾರತೀಯ ಆಟಗಾರರು ಮಾಸ್ಕ್ ಧರಿಸದೇ ಪಂದ್ಯವನ್ನು ಆಡಿದರು. ಇದಕ್ಕೆ ಶ್ರೀಲಂಕಾದ ಮಾಜಿ ಆಟಗಾರ ಅರವಿಂದ ಡಿ’ಸಿಲ್ವ ಮಂಗಳವಾರ ಪ್ರತಿಕ್ರಿಯಿಸಿದ್ದು, ಭಾರತೀಯ ಆಟಗಾರರ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಬಲಿಷ್ಠ ತಂಡ ಭಾರತ. ಆ ತಂಡದ ಆಟಗಾರರು ಅಪಾಯ ಮೈಮೇಲೆ ಎಳೆದುಕೊಂಡು ಆಡುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ವೇಗಿ ಶಮಿಗೂ ಅನಾರೋಗ್ಯ
ಭಾರತ ವೇಗಿ ಮೊಹಮ್ಮದ್‌ ಶಮಿ ಮಂಗಳವಾರದ ಆಟದ ವೇಳೆ ಅನಾರೋಗ್ಯದಿಂದ ಮೈದಾನದಿಂದ ಹೊರನಡೆದಿದ್ದರು. ಮೂಲಗಳ ಪ್ರಕಾರ ಅವರು ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಸೋಮವಾರದ ಆಟದ ಬಳಿಕ ಶಮಿ ಪ್ರತಿಕ್ರಿಯಿಸಿದ್ದು, ವಾಯುಮಾಲಿನ್ಯ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ನಮಗೆ ಮಾಲಿನ್ಯದಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದಿದ್ದರು.

Advertisement

ಆಯೋಜನೆಗೂ ಮುನ್ನ ಚಿಂತನೆ
ಮಾಲಿನ್ಯ ಕಾರಣದಿಂದ ಪಂದ್ಯಕ್ಕೆ ತೊಂದರೆ ಆಗಿರಬಹುದು ಎನ್ನುವುದನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಒಪ್ಪಿಕೊಂಡಿದ್ದಾರೆ. ಭವಿಷ್ಯದಲ್ಲಿ ದಿಲ್ಲಿ ಹಾಗೂ ಇಲ್ಲಿನ ಸುತ್ತಮುತ್ತ ಪಂದ್ಯ ಆಯೋಜಿಸುವಾಗ ಜಾಗರೂಕತೆ ವಹಿಸುವುದಾಗಿ ಅವರು ತಿಳಿಸಿದ್ದಾರೆ.

ವಾಯು ಮಾಲಿನ್ಯದ ಕಾರಣದ ಹೊರತಾಗಿಯೂ ಬಿಸಿಸಿಐ ಆವರ್ತನ ಪದ್ಧತಿ ಪ್ರಕಾರ 2020ರ ತನಕ ಹೊಸದಿಲ್ಲಿಗೆ ಟೆಸ್ಟ್‌ ಆತಿಥ್ಯ ಲಭಿಸದು ಎಂಬುದು ದಿನದ ಇನ್ನೊಂದು “ಬ್ರೇಕಿಂಗ್‌ ನ್ಯೂಸ್‌’.

Advertisement

Udayavani is now on Telegram. Click here to join our channel and stay updated with the latest news.

Next