ಬೀದರ: ಕ್ರೀಡಾ ಮತ್ತು ಶೈಕ್ಷಣಿಕ ಸಾಧನೆಗಳಿಂದ ರಾಜ್ಯದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಔರಾದ ತಾಲೂಕು ಯನಗುಂದಾ ಸರ್ಕಾರಿ ಪ್ರೌಢಶಾಲೆ ಈಗ ಕೋವಿಡ್ ಸಂಕಷ್ಟದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸುವ ಸೇವೆಗೆ ಮುಂದಾಗಿದೆ.
ಶಾಲೆ ಸ್ಕೌಟ್ ಮತ್ತು ಗೈಡ್ಸ್‌ನ ಮಕ್ಕಳು ಮತ್ತು ಪಾಲಕರೇ ಮಾಸ್ಕ್ಗಳನ್ನು ಸಿದ್ಧಪಡಿಸಿರುವುದು ವಿಶೇಷ. ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಕೂಡ ಮಾಸ್ಕ್ ಬಳಸಬೇಕಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಈಗ ಮಾಸ್ಕ್ಗಳ ಬೆಲೆ ದುಬಾರಿ ಇದ್ದು, ಗ್ರಾಮೀಣ ಮಕ್ಕಳಿಂದ ಖರೀದಿ ಕಷ್ಟ. ಇದನ್ನು ಮನಗಂಡ ಯನಗುಂದಾ ಶಾಲೆ ಔರಾದ ತಾಲೂಕಿನ ಪರೀಕ್ಷಾರ್ಥಿಗಳಿಗೆ 1500 ಮಾಸ್ಕ್ ಸಿದ್ಧಪಡಿಸಿದೆ. ಈ ಮೂಲಕ ಕೋವಿಡ್ ಕಾರಣದಿಂದ ದೊರೆತ ರಜೆಯನ್ನು ಸಾರ್ಥಕ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಂಡಿದೆ. ರಾಜ್ಯಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದಾನಿಗಳ ನೆರವಿನಿಂದ ಬಟ್ಟೆ ಖರೀದಿಸಿ ವಿದ್ಯಾರ್ಥಿಗಳಿಂದ ಮಾಸ್ಕ್ ವಿತರಿಸುವ ಯೋಜನೆ ರೂಪಿಸಿದೆ. ಆದರೆ, ಯನಗುಂದಾ ಶಾಲೆ ಸ್ಕೌಟ್- ಗೈಡ್ಸ್‌ನ ಮಾಸ್ಟರ್ ಮಲ್ಲಿಕಾರ್ಜುನ ಟಂಕಸಾಲೆ ದಾನಿಗಳ ನೆರವಿಲ್ಲದೇ ಸಂಸ್ಥೆ ಸೇವೆಗೆ ಕೈಜೋಡಿಸಿದ್ದಾರೆ.
ತಮ್ಮ ಶಾಲೆ ಮುಖ್ಯಗುರು ಸೇರಿ 7 ಜನ ಶಿಕ್ಷಕರ ನೆರವಿನಿಂದ ಸುಮಾರು 60 ಮೀಟರ್ ಬಟ್ಟೆ, ಎಲಾಸ್ಟಿಕ್ ಮತ್ತು ದಾರ ಖರೀದಿಸಿದ್ದಾರೆ. ಗ್ರಾಮದಲ್ಲಿ ಹೊಲಿಗೆ ಯಂತ್ರ ಹೊಂದಿರುವ ಸ್ಕೌಟ್ಸ್‌ನ 6 ಜನ ವಿದ್ಯಾರ್ಥಿಗಳಿಗೆ ನೀಡಿದ್ದು, ಆ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕೇವಲ 10 ದಿನಗಳಲ್ಲಿ ತಮ್ಮ ಪಾಲಕರ ಸಹಾಯದೊಂದಿಗೆ ಈಗ 1500 ಮಾಸ್ಕ್ ತಯಾರಿಸಿದ್ದಾರೆ. ಔರಾದ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ 13 ಕೇಂದ್ರ ಸ್ಥಾಪಿಸಲಾಗಿದ್ದು, ಸುಮಾರು 3500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯನಗುಂದಾ ಶಾಲೆ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಮಾಸ್ಕ್ಗಳನ್ನು ಐದಾರು ಕೇಂದ್ರದ ಮಕ್ಕಳಿಗೆ ವಿತರಿಸಲು ನಿರ್ಧರಿಸಿರುವ ಶಾಲೆ ಮುಖ್ಯಸ್ಥರು, ಸದ್ಯ ಮಾಸ್ಕ್ಗಳನ್ನು ಬಿಇಒ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಯನಗುಂದಾ ಸರ್ಕಾರಿ ಶಾಲೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ 1500 ಮಾಸ್ಕ್ ತಯಾರಿಸಲಾಗಿದೆ. ಮಾಸ್ಕ್ಗಾಗಿ ಬಟ್ಟೆ ಖರೀದಿಗೆ ಶಿಕ್ಷಕರು ಸಹಕಾರ ನೀಡಿದ್ದಾರೆ. ಪರೀಕ್ಷೆ ಮೊದಲ ದಿನದಂದು ಸಮವಸ್ತ್ರಧಾರಿಯಾಗಿ ಬರುವ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ಶಿಕ್ಷಕರಿಂದಲೇ ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗುವುದು. –
ಮಲ್ಲಿಕಾರ್ಜುನ ಟಂಕಸಾಲೆ, ಸ್ಕೌಟ್ಸ್-ಗೈಡ್ಸ್ ಮಾಸ್ಟರ್ ಸರ್ಕಾರಿ ಶಾಲೆ ಯನಗುಂದಾ
-ಶಶಿಕಾಂತ ಬಂಬುಳಗೆ