ಉಡುಪಿ: ಕೋವಿಡ್ 19 ವೈರಸ್ ಸಂಬಂಧಿಸಿದಂತೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದರೂ ಅದರ ಉಲ್ಲಂಘನೆಯೂ ಅಷ್ಟೇ ವೇಗವಾಗಿ ನಡೆಯುತ್ತಿರುವುದು ಮಾತ್ರ ವಿಪರ್ಯಾಸವಾಗಿ ಪರಿಣಮಿಸಿದೆ.
ನಗರ ಸಭೆಯ ಕಸ ವಿಲೇವಾರಿ ಮಾಡುವ ಕಾರ್ಮಿಕರರಿಗೆ ಈಗ ಹೊಸ ತಲೆನೋವು ಪ್ರಾರಂಭವಾಗಿದೆ.
ಕೋವಿಡ್ 19 ವೈರಸ್ ಕಾಟದಿಂದಾಗಿ ಮಾಸ್ಕ್ ಧರಿಸುವವರ ಸಂಖ್ಯೆ ಹೆಚ್ಚಳವಾಗಿದ್ದು, ಅದರ ವಿಲೇವಾರಿಯೂ ಕಷ್ಟಕರವಾಗಿ ಪರಿಣಮಿಸಿದೆ. ಮಾಸ್ಕ್ ಗಳನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಅದರ ವಿಲೇವಾರಿಯೂ ಕಷ್ಟಕರವಾಗಿದೆ. ಇನ್ನೊಂದು ಅಂಶ ಏನೆಂದರೆ ಇದನ್ನು ವಿಲೇವಾರಿ ಮಾಡುವ ಕಾರ್ಮಿಕರೂ ಕೂಡ ಮಾಸ್ಕ್ ಬಳಸುತ್ತಿಲ್ಲ.
ನಗರದ ನಾಯರ್ ಕೆರೆ ರಸ್ತೆಯಲ್ಲಿ ಒಣ ಕಸ ವಿಲೇವಾರಿಗೆ ಬರುವ ನಗರಸಭೆಯ ಕಾರ್ಮಿಕರ ಬಳಿ ವಿಚಾರಿಸಿದಾಗ ಜನರು ಮುಖಕ್ಕೆ ಬಳಸುವ ಮಾಸ್ಕ್ಗಳನ್ನು ಅದರಲ್ಲೇ ಹಾಕುತ್ತಾರೆ. ಇದನ್ನು ಈ ರೀತಿ ತೊಟ್ಟಿಗಳಲ್ಲಿ ಹಾಕಬಹುದೇ ಎಂಬ ಬಗ್ಗೆಯೂ ಅವರಲ್ಲಿ ಮಾಹಿತಿಯಿರಲಿಲ್ಲ. ಕೈಗೆ ಗ್ಲೌಸ್‌ಗಳನ್ನೂ ಹಾಕದೆಯೇ ಇದನ್ನು ಅವರು ವಿಲೇವಾರಿ ಮಾಡುತ್ತಿರುವುದು ಕಂಡುಬಂತು.
ಬಳಸಿರುವ ಮಾಸ್ಕ್ಗಳನ್ನು ಅಪಾಯಕಾರಿ ಡಸ್ಟ್‌ಬಿನ್‌ನೊಳಗೆ ಪೇಪರ್‌ನಲ್ಲಿ ಕಟ್ಟಿ ಬಿಸಾಡಬೇಕು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉತ್ತಮ ಎಂದು ನಗರಸಭೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.