Advertisement

ಮಾಸಣಗಿ ವೀರಭದ್ರೇಶ್ವರ ರಥ ಲೋಕಾರ್ಪಣೆ

04:42 PM Mar 31, 2022 | Team Udayavani |

ಬ್ಯಾಡಗಿ: ದೇವಾಲಯದ ಆವರಣ ಪವಿತ್ರ ಜಾಗೃತ ಪ್ರದೇಶವಾಗಿದೆ. ಅಲ್ಲಿನ ವಾತಾವರಣ ಕಲುಷಿತಗೊಂಡಲ್ಲಿ ಸಮುದಾಯದಗಳ ಮಧ್ಯೆ ಸಾಮರಸ್ಯದ ಬದುಕಿಗೆ ಪೆಟ್ಟು ಬೀಳಲಿದೆ. ಹಾಗಾಗಿ, ಅವು ಎಂದಿಗೂ ಪ್ರಚೋದನಾತ್ಮಕ ಸ್ಥಳವಾಗಬಾರದು. ಆದರೆ, ಇತ್ತೀಚೆಗೆ ತಮ್ಮ ಸ್ವಾರ್ಥ ಸಾಧನೆಗೆ ದೇವಾಲಯ ಬಳಕೆ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ನೆಗಳೂರ ಹಿರೇಮಠದ ಗಂಗಾಧರಯ್ಯ ಹೇಳಿದರು.

Advertisement

20 ಲಕ್ಷ ರೂ. ವೆಚ್ಚದಲ್ಲಿ ಮಾಸಣಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ಕುಂದಾಪುರದ ಶಿಲ್ಪಿ ರಾಜಗೋಪಾಲಾಚಾರ್‌ ಅವರು ನಿರ್ಮಿಸಿರುವ ನೂತನ ರಥವನ್ನು ಭಕ್ತರಿಗೆ ಸಮರ್ಪಿಸಿ ಮಾತನಾಡಿದರು.

ಜಾತ್ಯತೀತ ತಳಹದಿಯಲ್ಲಿ ನಿರ್ಮಾಣವಾಗಿರುವ ದೇಶದಲ್ಲಿ ದೇವಾಲಯಗಳನ್ನು ನಿರ್ಮಿಸಲು ಎಲ್ಲ ಧರ್ಮದವರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಅವುಗಳನ್ನು ಕೇವಲ ಭಕ್ತಿದ್ಯೋತಕ ಕಾರ್ಯಕ್ರಮಕ್ಕೆ ಬಳಕೆ ಮಾಡಬೇಕೆ ವಿನಃ ಪ್ರಚೋದನಾತ್ಮಕ ಹೇಳಿಕೆಗಳ ತಾಣವಾಗಬಾರದು. ಬಹುತೇಕ ಧರ್ಮಗಳು ಸಂದಿಗ್ಧ ಸ್ಥಿತಿ ಎದುರಿಸುತ್ತಿವೆ. ಇಂತಹ ಸನ್ನಿವೇಶದಲ್ಲಿ ಸ್ವಾರ್ಥ ಬದಿಗೊತ್ತಿ ಸಮಾಜದ ಹಿತಕ್ಕೆ ಶ್ರಮಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕೆಂದರು.

ಒತ್ತಡದ ಆಚರಣೆ ಬೇಡ: ಭಯ ಮತ್ತು ಭಕ್ತಿ ನಾಣ್ಯದ ಎರಡು ಮುಖಗಳು ಇದ್ದಂತೆ. ದೇವರ ಮೇಲಿನ ಅಂತರಾತ್ಮದ ಭಯವೇ ಮುಂದೆ ಭಕ್ತಿಗೆ ಕಾರಣವಾಗುತ್ತದೆ. ಧರ್ಮಾಚರಣೆಗೆ ಇನ್ನೊಬ್ಬರು ಭಯ ಒಡ್ಡಬಾರದು. ಅವರವರ ವಿವೇಚನೆ ಮತ್ತು ಆಯ್ಕೆಗೆ ಬಿಡುವುದು ಅತ್ಯಂತ ಸೂಕ್ತ. ಭಕ್ತಿಯ ಪರಾಕಾಷ್ಟೆ ಮನುಷ್ಯನ ವೈಯಕ್ತಿಕ ಸ್ವಾರ್ಥ ಸಾಧನೆಯಿಂದ ಸಮಾಜದಲ್ಲಿ ಅನೀತಿ, ಅನಾಚಾರಗಳು ತಾಂಡವವಾಡುತ್ತಿರುವುದು ಖೇದಕರ ಸಂಗತಿ ಎಂದರು.

ಗ್ರಾಮಸ್ಥರ ಉದ್ದೇಶ ಈಡೇರಿದೆ: ರಥ ನಿರ್ಮಾಣದಲ್ಲಿ ಗ್ರಾಮಸ್ಥರೆಲ್ಲರೂ ತನು-ಮನ- ಧನದಿಂದ ಕೈಜೋಡಿಸಿದ್ದಾರೆ. ಸದ್ಭಕ್ತರ ನೆರವಿ ನಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಸುಂದರ ತೇರು ಅನಾವರಣಗೊಂಡಿದೆ. ಗ್ರಾಮಸ್ಥರು ಮಾಡಿದ ಸತ್ಕಾರ್ಯ ನೂರಾರು ವರ್ಷಗಳ ಕಾಲ ಜನಮಾನಸದಲ್ಲಿ ಉಳಿಯಲಿದೆ. ತೇರು ನಿರ್ಮಾಣದಲ್ಲಿ ಪಾಲ್ಗೊಂಡವರು ಅಭಿನಂದನಾರ್ಹರು ಎಂದರು.

Advertisement

ರಥ ಶಿಲ್ಪಿ ಕುಂದಾಪುರ ರಾಜಗೋಪಾಲಾ ಚಾರ್‌ ನಿರ್ಮಿಸಿದ ತೇರನ್ನು ಮೆರವಣಿಗೆ ಮೂಲಕ ವೀರಭದ್ರೇಶ್ವರ ದೇಗುಲ ಆವರಣಕ್ಕೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರ ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಝಾಂಜ್‌, ಭಜನಾ ಮೇಳಗಳು ಗ್ರಾಮಸ್ಥರು ಸಂಭ್ರಮಿಸುವಂತೆ ಮಾಡಿದವು.

ಈ ವೇಳೆ ಮಲಕಪ್ಪ ಮುಳಗುಂದ, ಬಸಪ್ಪ ಬನ್ನಿಹಟ್ಟಿ, ನಿಂಗಪ್ಪ ಹೆಗ್ಗಣ್ಣನವರ, ಪ್ರಕಾಶ ಬನ್ನಿಹಟ್ಟಿ, ಈರಣ್ಣ ಬಂಗೇರ, ಮಲ್ಲಪ್ಪ ದೇಸಾಯಿ, ಬಸವರಾಜ ಬನ್ನಿಹಟ್ಟಿ, ಶಂಭಣ್ಣ ಹಿರೇಮಠ, ಜಮದಜ್ಞೆಪ್ಪ ಕೆಪ್ಲಲಿಂಗಣ್ಣವರ, ಈರಯ್ಯ ಮಾನಿಹಳ್ಳಿ ಮಠ, ಈರಪ್ಪ ಬನ್ನಿಹಟ್ಟಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next