ಮೇರಿಲ್ಯಾಂಡ್: ಸ್ವಂತ ಮನೆ ಕಟ್ಟಲೆಂದು ಜೀವನಪೂರ್ತಿ ಕಷ್ಟಪಟ್ಟು ದುಡಿದು ಹಣ ಉಳಿತಾಯ ಮಾಡುವವರನ್ನು ನೀವು ನೋಡಿರುತ್ತೀರಿ. ಆದರೆ, ಅದೇ ಮನೆಯಿಂದ ಜೀವಕ್ಕೇ ಕುತ್ತಾಗುತ್ತದೆ ಎಂದಾಗ ಜೀವ ಉಳಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಇಂಥದ್ದೇ ಘಟನೆ ನಡೆದಿದೆ.
ದಿನಂಪ್ರತಿ ಮನೆಗೆ ನುಗ್ಗುತ್ತಿದ್ದ ಸರ್ಪಗಳಿಂದ ಮುಕ್ತಿ ಪಡೆಯಲೆಂದು ಮನೆ ಮಾಲೀಕ ಬರೋಬ್ಬರಿ 13.50 ಕೋಟಿ ರೂ. ಪಾವತಿಸಿ ಇತ್ತೀಚೆಗಷ್ಟೇ ಖರೀದಿಸಿದ್ದ ಮನೆಯನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ!
ಹಾಗಂತ ಇದನ್ನು ಆತ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಈ ವ್ಯಕ್ತಿ ಆ ಮನೆಯನ್ನು ಖರೀದಿಸುವ ಮುನ್ನ ಆ ಮನೆಯಲ್ಲಿ ಬಾಡಿಗೆಗಿದ್ದವರು ಕೂಡ ಹಾವುಗಳ ಕಾಟದಿಂದ ರೋಸಿ ಹೋಗಿದ್ದರಂತೆ.
ಏನೂ ಆಗಲಿಕ್ಕಿಲ್ಲ ಎಂದು ಭಾವಿಸಿ ಇವರು ಮನೆಯನ್ನು ಕೊಂಡುಕೊಂಡಿದ್ದರು. ಆದರೆ, ಮನೆಗೆ ಬಂದಿದ್ದೇ ತಡ, ಹಾವುಗಳು ದಿನನಿತ್ಯ “ಅತಿಥಿ’ಗಳಂತೆ ಮನೆಗೆ ಆಗಮಿಸುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲ ಹಾವುಗಳನ್ನು ಕಂಡರೆ ಯಾರಿಗಾದರೂ ಹೇಗಾಗಿರಬೇಡ? ಇದರಿಂದ ಕಂಗಾಲಾದ ಮಾಲೀಕ, ಭಾನುವಾರ ಒಂದಿಷ್ಟು ಕಲ್ಲಿದ್ದಲನ್ನು ತಂದು ಅದಕ್ಕೆ ಬೆಂಕಿ ಕೊಟ್ಟಿದ್ದಾನೆ. ಕಲ್ಲಿದಲ್ಲಿನಿಂದ ಏಳುವ ಹೊಗೆ ತಾಳಲಾರದೇ ಸರ್ಪಗಳು ಓಡಿಹೋಗಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಬೆಂಕಿಯು ಕ್ಷಣಮಾತ್ರದಲ್ಲಿ ಅಲ್ಲಿದ್ದ ದಹ್ಯ ವಸ್ತುಗಳಿಗೆ ವ್ಯಾಪಿಸಿ, 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆಯನ್ನೇ ಸುಟ್ಟು ಕರಕಲಾಗಿಸಿದೆ.
ಇದನ್ನೂ ಓದಿ:ವಾಹನ ಸಂಚಾರ ಬಿಡಿ; ನಡೆದುಕೊಂಡು ಹೋಗುವುದೇ ದೊಡ್ಡ ಸವಾಲು
ಮನೆಯು ಹೊತ್ತಿ ಉರಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ವೀಟಿಗರು ಈ ಘಟನೆ ಬಗ್ಗೆ ತಮಗೆ ತೋಚಿದಂತೆ ಅಭಿಪ್ರಾಯಗಳನ್ನೂ ಹರಿಬಿಟ್ಟಿದ್ದಾರೆ