Advertisement

ಮೇರಿ ಪ್ಯಾರಿ ಸ್ಯಾರಿ

02:14 PM Sep 20, 2017 | |

ಸೀರೆ ಉಟ್ಕೊಂಡು ನಡೆಯೋದು ಅಂದ್ರೆ ಎಷ್ಟು ಕಷ್ಟ ಅಂತ ಮಾಡರ್ನ್ ಹುಡ್ಗಿರು ಕಂಪ್ಲೇಂಟ್‌ ಮಾಡುತ್ತಿದ್ದರೆ, ಇತ್ತ ಹುಡುಗರು “ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರು’ ಅಂತ ಹಾಡ್ತಾ, ಸೀರೆಯುಟ್ಟ ಮಾನಿನಿಗೆ ಶಹಬ್ಟಾಸ್‌ಗಿರಿ ಕೊಡುತ್ತಾರೆ. ಹಳೇ ಕಾಲದವರು ಎಷ್ಟೇ ಕಷ್ಟವಾದ್ರೂ ಸೀರೆಯಲ್ಲಿಯೇ ತಮ್ಮ ಜೀವಮಾನ ಕಳೆದುಬಿಡುತ್ತಿದ್ದರು. ಆಗ ಅವರ ಉಡುಪುಗಳಲ್ಲಿ ಈಗಿರುವಷ್ಟು ಆಯ್ಕೆಗಳೂ ಇದ್ದಿರಲಿಲ್ಲ. ಈಗಿನ ಹುಡುಗಿಯರು ಎಷ್ಟೇ ಝಗಮಗ ಡ್ರೆಸ್‌ ತೊಟ್ಟರೂ, ಅನಾದಿ ಕಾಲದ ಸೀರೆ ಆಗಾಗ್ಗೆ ಮಿಂಚು ಹರಿಸುತ್ತಲೇ ಇರುತ್ತೆ. ಸೀರೆ, ಸಲ್ವಾರ್‌ ಕಮೀಜ್‌ನಂಥ ದೇಸಿ ಉಡುಪುಗಳನ್ನು ಧರಿಸಿಯೇ ಇಲ್ಲಿ ಕೆಲವು ಮಹಿಳೆಯರು ವಿಭಿನ್ನ ಸಾಧನೆಗೈದಿದ್ದಾರೆ. ಆ ಇಂಟೆರೆಸ್ಟಿಂಗ್‌ ಕತೆಗಳನ್ನು ಒಮ್ಮೆ ಓದಿಬಿಡಿ…

Advertisement

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಮ್ಯಾರಥಾನ್‌ ರೇಸ್‌ ನಡೆಯಿತು. 42 ಕಿ.ಮೀ ದೂರದ ರೇಸ್‌ನಲ್ಲಿ ಒಟ್ಟು 20 ಸಾವಿರ ಮಂದಿ ಪಾಲ್ಗೊಂಡಿದ್ದರು. ಅವತ್ತು ರೇಸ್‌ನ ಕೇಂದ್ರಬಿಂದು ಆಗಿದ್ದು, ಒಬ್ಬರು ಮಹಿಳೆ! ಹೆಸರು ಜಯಂತಿ ಸಂಪತ್‌ ಕುಮಾರ್‌. ಪೂರ್ತಿ 42 ಕಿ.ಮೀ. ಮ್ಯಾರಾಥಾನ್‌ ಓಟ ಮುಗಿಸಿದ್ದು ಒಂದು ಕಾರಣವಾದರೆ, ಅದಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಸೆಳೆಯೋದಕ್ಕೆ ಕಾರಣ ಏನ್‌ ಗೊತ್ತಾ? ಜಯಂತಿ ಅವತ್ತು ಸೀರೆ ಉಟ್ಟುಕೊಂಡೇ 42 ಕಿ.ಮೀ. ಓಡಿದ್ದು! ಸೀರೆಯುಟ್ಟು ನಾಲ್ಕು ಹೆಜ್ಜೆ ಎತ್ತಿಡಲೂ ಪ್ರಯಾಸ ಪಡುವವರಿದ್ದಾರೆ. ಅಂಥದ್ದರಲ್ಲಿ 42 ಕಿ.ಮೀ. ಓಡೋದಂದ್ರೆ ಸುಮ್ನೆàನಾ? ಆದರೆ, ಅವರು ಸೀರೆಯಲ್ಲೇ ಓಡೋದಿಕ್ಕೆ ಒಂದು ಕಾರಣವೂ ಇತ್ತು. ಕೈಮಗ್ಗ ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವರು ಸೀರೆಯುಟ್ಟುಕೊಂಡೇ ಓಡಿದ್ದರು. ಹಾಗಾಗಿ, ಫ‌ಲಿತಾಂಶಕ್ಕಾಗಿ ಮ್ಯಾರಥಾನ್‌ ಓಟ ಮುಗಿಯುವ ತನಕ ಕಾಯುವಂತೆಯೇ ಇರಲಿಲ್ಲ, ಸ್ಪರ್ಧೆ ಶುರುವಾಗೋ ಮುಂಚೆಯೇ ಜಯಂತಿ ರೇಸ್‌ನಲ್ಲಿ ಗೆದ್ದು ಬಿಟ್ಟಿದ್ದರು! 

ಆ ಹಳ್ಳಿಯಲ್ಲಿ ಹೆಂಗಸರಿಬ್ಬರು ಸೀರೆ ಸೆರಗನ್ನು ಸೊಂಟಕ್ಕೆ ಸುತ್ತಿ ಬುಸುಗುಡುತ್ತ ಥೇಟ್‌ ಕಿರಗೂರಿನ ಗಯ್ನಾಳಿಯರಂತೆ ಜಗಳ ಆರಂಭಿಸಿದ್ದರು. ಸುತ್ತಮುತ್ತಲಿನ ಜನರು ಅವರ ಜಗಳವನ್ನು ಬಿಡಿಸುವುದಿರಲಿ, ಅವರನ್ನು ಹುರಿದುಂಬಿಸಲು ನಿಂತುಬಿಟ್ಟಿದ್ದರು. ನಲ್ಲಿ ನೀರಿಗಾಗಿಯೋ, ಮತಾöವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ನಡೆದ ಕೋಳಿ ಜಗಳ ಅದಾಗಿರಲಿಲ್ಲ. ನಿಜ ಹೇಳಬೇಕೆಂದರೆ, ಅದು ಜಗಳದ ಸ್ಪರ್ಧೆಯಾಗಿತ್ತು. ಹಾಗೂ ಇದೆಯೇ ಎಂದು ಅಚ್ಚರಿ ಪಡುವವರು ಪೂರ್ತಿ ಕತೆ ಕೇಳಿ.

ಈ ಜಗಳದ ಸ್ಪರ್ಧೆ ಲಕೌ° ಬಳಿಯ ಅಹಿಮಮಾ ಎಂಬ ಹಳ್ಳಿಯಲ್ಲಿ ನಡೆಯುತ್ತೆ. ಈ ಸ್ಪರ್ಧೆಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ನಾಗರಪಂಚಮಿಯ ಮಾರನೇ ದಿನ ಸುತ್ತಮುತ್ತಲ 15 ಹಳ್ಳಿಗಳಿಂದ ಮಹಿಳೆಯರು ಜಗಳದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾನಪದ ಗೀತೆಗಳ ಹಿನ್ನೆಲೆ ಸಂಗೀತಕ್ಕೆ, ಸೀರೆ ಸೆರಗು ಬಿಗಿದು ಕುಸ್ತಿ ಆಡುವವರಲ್ಲಿ ಯಾರೂ ನುರಿತ ಕುಸ್ತಿಪಟುಗಳಿಲ್ಲ. ಹದಿಹರೆಯದವರಿಂದ ಹಿಡಿದು ಮುದುಕಿಯರವರೆಗೆ ಎಲ್ಲರೂ ಸೀರೆಯಲ್ಲಿಯೇ ಅಖಾಡಕ್ಕಿಳಿಯುತ್ತಾರೆ!

ಹಾಂ, ಇನ್ನೊಂದು ವಿಶೇಷ, ಈ ಪಂದ್ಯವನ್ನು ನೋಡಲು ಗಂಡಸರಿಗೆ ಅವಕಾಶವಿಲ್ಲ! ಸ್ಪರ್ಧೆ ನಡೆಯುವ ಜಾಗದಲ್ಲೇನಾದರೂ ಗಂಡಸರು ಸುಳಿದರೆ ಪೊಲೀಸರಿಂದ ಲಾಠಿ ಏಟು ತಿನ್ನಬೇಕಾಗುತ್ತದೆ. ಜಗಳ ಆಡಲು ಬರುವ ಅಮ್ಮಂದಿರು ತಮ್ಮ ಜೊತೆ ಗಂಡು ಮಕ್ಕಳನ್ನು ಕರೆದೊಯ್ಯಲೂ ನಿಷೇಧವಿದೆ. ಅಷ್ಟರಮಟ್ಟಿಗೆ ಈ ಸ್ಪರ್ಧೆ ಕಡ್ಡಾಯವಾಗಿ ಮಹಿಳೆಯರಿಗೆ ಮಾತ್ರ!

Advertisement

ಕೇರಳದ ಪ್ರಾಚೀನ ಸಮರ ಕಲೆ, ಕಲರಿಪಯಟ್ಟು “ಗಂಡುಕಲೆ’ ಎಂದೇ ಪ್ರಸಿದ್ಧಿ. ಸಾಮಾನ್ಯವಾಗಿ ಸಮರ ಕಲೆಯನ್ನು ಗಂಡಸರೇ ಹೆಚ್ಚಾಗಿ ಕಲಿಯೋದು. ಹಾಗೆ ಕಲಿಸುವ ಗುರುಗಳು ಕೂಡ ಗಂಡಸರೇ ಆಗಿರುತ್ತಾರೆ. ಈ ಅಲಿಖೀತ ನಿಯಮವನ್ನು ಮುರಿದಿದ್ದು ಮೀನಾಕ್ಷಿ ರಾಘವನ್‌ ಎಂಬ ಅಜ್ಜಿ. ಗಂಡಸರ ಮುಂದೆ ತಲೆ ಎತ್ತಿ ಮಾತಾಡುವುದನ್ನೇ ಅಪರಾಧದಂತೆ ಕಾಣುತ್ತಿದ್ದ ಕಾಲವೊಂದಿತ್ತು. ಹೀಗಿರುವಾಗ ಗಂಡಸಿನ ಮುಂದೆ ಕತ್ತಿ ಎತ್ತಿದ್ದೇ ಅಲ್ಲದೆ, ಆ ವಿದ್ಯೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದು ಈಗ ಗುರುವಾಗಿದ್ದಾರೆ. 

ಇವರು ಸೀರೆಯುಟ್ಟುಕೊಂಡೇ ಸಮರಕಲೆ ಪ್ರದರ್ಶಿಸುತ್ತಾರೆ ಎನ್ನುವುದು ವಿಶೇಷ. 69 ವರ್ಷದ ಮೀನಾಕ್ಷಿ ಅಮ್ಮ, ಕಚ್ಚೆ ಕಟ್ಟಿ ಕತ್ತಿ ಗುರಾಣಿ ಹಿಡಿದು ಬಾಹುಬಲಿಯ ದೇವಸೇನಾಳನ್ನೂ ನಾಚಿಸುವಂತೆ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿಬಿಡುತ್ತಾರೆ. 
ಬಾಲ್ಯದಿಂದಲೇ ಕಲರಿಪಯಟ್ಟನ್ನು ಕಲಿತ ಮೀನಾಕ್ಷಮ್ಮ ಈಗ ಕಿರಿಯರಿಗೆ ತಾವು ಕಲಿತ ವಿದ್ಯೆಯನ್ನು ದಾಟಿಸುವ ಗುರುವಾಗಿದ್ದಾರೆ. ಅವರ ಬಳಿ 150ಕ್ಕೂ ಹೆಚ್ಚು ಮಕ್ಕಳು ಈ ಸಮರಕಲೆಯನ್ನು ಕಲಿಯುತ್ತಿದ್ದಾರೆ. 

ಸಲ್ವಾರ್‌ನಲ್ಲೇ ಸಮರ!
ಗಗಊ, ಗಗಉ (ವರ್ಲ್ಡ್ ರೆಸ್ಲಿಂಗ್‌ ಎಂಟರ್‌ಟೇನ್ಮೆಂಟ್‌) ನಂಥ ಹೊಡೆದಾಡುವ ಸ್ಪರ್ಧೆಗಳನ್ನು ಯಾರಿಗೂ ಪರಿಚಯ ಮಾಡಿಕೊಡಬೇಕಿಲ್ಲ. ಕೆಲವರು ಇವನ್ನು ಇಷ್ಟಪಡೋದೂ ಇಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಬರೀ ಗಂಡಸರಷ್ಟೇ ಹೊಡೆದಾಡುತ್ತಿದ್ದ ಕಾಲವೊಂದಿತ್ತು. ಆದರೆ, ನಂತರ ಮಹಿಳೆಯರ ವಿಭಾಗವೂ ಪ್ರಾರಂಭಗೊಂಡಿತು. ಅರೆಬರೆ ಬಟ್ಟೆ ತೊಟ್ಟು, ಅದೆಂಥ ಹೊಡೆದಾಡೋದು ಎಂದು ಹೆಚ್ಚಿನವರು ತಾತ್ಸಾರ ಮಾಡಿರಲಿಕ್ಕೂ ಸಾಕು. 

ಇಷ್ಟು ಪೀಠಿಕೆ ಏಕೆಂದರೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಡಬ್ಲ್ಯು ಡಬ್ಲ್ಯುಇ ಪಂದ್ಯಾವಳಿಯ ಹೆಣ್ಮಕ್ಕಳ ವಿಭಾಗದಲ್ಲಿ ಭಾರತದ ಕವಿತಾ ದೇವಿ ಸಿಂಗ್‌ ಪಾಲ್ಗೊಂಡಿದ್ದರು. ಅಂದಿನ ಸ್ಪರ್ಧೆಯ ನ್ಯೂಜಿಲೆಂಡಿನ ಎದುರಾಳಿ ಮುಂದೆ ಸೋತಿದ್ದೇನೋ ನಿಜ. ಆದರೆ, ಲಕ್ಷಾಂತರ ಭಾರತೀಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಳು ಕವಿತಾ. ಸಲ್ವಾರ್‌ ಕಮೀಜ್‌ ತೊಟ್ಟು ಅಖಾಡಕ್ಕೆ ಇಳಿದಿದ್ದು ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವಾಗ ನ್ಪೋರ್ಟ್ಸ್ವೇರ್‌ ಧರಿಸಬೇಕೆಂದು ಹಟ ಹಿಡಿಯುವವರ ನಡುವೆ ಸಾಂಪ್ರದಾಯಿಕ ದಿರಿಸು ತೊಟ್ಟ ಹರ್ಯಾಣದ ಕವಿತಾ ಮಿಂಚಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

ಪ್ರಿಯಾಂಕ 

Advertisement

Udayavani is now on Telegram. Click here to join our channel and stay updated with the latest news.

Next