Advertisement
ಇನ್ನು ಮುಂದೆ ಮೇರಿ ಕೋಮ್ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಅನ್ನುವುದು ಆಕೆಗೆ ಗೊತ್ತು. ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಗೊತ್ತು. ಭಾರತದ ಫೈಟಿಂಗ್ ಸ್ಪಿರಿಟ್ ಇಂದು ಇತಿಹಾಸದ ಪುಟಗಳಲ್ಲಿ ಸೇರಿ ಹೋದದ್ದು ದೊಡ್ಡ ಸುದ್ದಿಯೇ ಆಗಬೇಕಿತ್ತು. ಅಂದ ಹಾಗೆ ಆಕೆಗೆ ಈಗ 39 ವರ್ಷ! ಈ ವಯಸ್ಸಿನಲ್ಲಿ ಕೂಡ ಆಕೆ ಬಾಕ್ಸಿಂಗ್ ರಿಂಗಲ್ಲಿ ಚಿರತೆಯಂತೆ ಆಡುವುದನ್ನು ನೋಡುವಾಗ ರೋಮಾಂಚನ ಆಗುತ್ತದೆ.
Related Articles
Advertisement
ಅಂಧ ಶೃದ್ದೆಗಳ ಊರು ಅದು. ಅಪ್ಪ ಸಿಕ್ಕಾಪಟ್ಟೆ ರಾಂಗ್ ಆದರು. ನಿನಗೆ ನಾನು ಬೇಕಾ? ಬಾಕ್ಸಿಂಗ್ ಬೇಕಾ? ಎಂದು ಕೇಳಿದಾಗ ಮಗಳು ಸಿಡಿದು ಬಾಕ್ಸಿಂಗ್ ಬೇಕು ಎಂದು ಹೇಳುತ್ತಾಳೆ. ಸಿಟ್ಟು ಮಾಡಿಕೊಂಡ ಅಪ್ಪ ಬಾಕ್ಸಿಂಗ್ ಗ್ಲೌಸನ್ನು ಕಿತ್ತುಕೊಂಡು ಒಲೆಯ ಬೆಂಕಿಗೆ ಹಾಕಿದಾಗ, ಅದು ಧಗ ಧಗ ಎಂದು ಉರಿಯುತ್ತ ಹೋದಾಗ ಬೆಂಕಿಯ ನಾಲಿಗೆಯನ್ನು ಬಹಳ ದೊಡ್ಡ ಕಣ್ಣು ಮಾಡುತ್ತ ಆಪೋಷಣೆ ಮಾಡಿದ ಮಗಳು ಅಂದೇ ನಿರ್ಧಾರ ಮಾಡಿ ಆಗಿತ್ತು, ನನ್ನ ಜೀವನ ಮುಂದೆ ಏನಿದ್ರೂ ಬಾಕ್ಸಿಂಗ್ ಮಾತ್ರ ಎಂದು. ಅವಳ ಹಟದ ಮುಂದೆ ಮನೆಯವರೇ ಸೋಲನ್ನು ಒಪ್ಪಿದ್ದು ಅವಳ ಸಾಧನೆಯ ಮುಂದಿನ ಭಾಗ.
ಮೇರಿ ಕೋಮ್ ಎತ್ತರ ಐದು ಅಡಿ ಮೂರು ಇಂಚು. ಇದು ಯಾವುದೇ ಬಾಕ್ಸರ್ ಗೆ ಕಡಿಮೆಯೇ ಸರಿ. ಆದರೆ ಮೇರಿಗೆ ಅದೆಲ್ಲ ಮುಖ್ಯ ಅಲ್ಲ. ಬಾಕ್ಸಿಂಗ್ ರಿಂಗ್ಸ್ ನಲ್ಲಿ ತನ್ನ ಎದುರಾಳಿಯನ್ನು ಹೊಡೆದು ಉರುಳಿಸುವುದೆ ಅವಳ ಉದ್ದೇಶ. ದಿನಕ್ಕೆ ಕನಿಷ್ಟ 16 ಗಂಟೆ ಪ್ರಾಕ್ಟೀಸ್! ಬೇರೆ ಹುಡುಗಿಯರ ಹಾಗೆ ಆಕೆಯನ್ನು ಋತು ಚಕ್ರ, ಬೆನ್ನು ನೋವು, ಆಯಾಸ, ಸೊಂಟ ನೋವು, ಮದುವೆ, ಬಾಣಂತನ, ಹೆರಿಗೆ ಇದ್ಯಾವುದೂ ತಡೆಯಲಿಲ್ಲ ಅನ್ನುವುದು ಅವಳ ಶಕ್ತಿಗೆ ಸಾಕ್ಷಿ.
ಒಟ್ಟು ಆರು ಬಾರಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಬೇರೆ ಯಾವ ಬಾಕ್ಸರ್ ಜಗತ್ತಿನಲ್ಲಿ ಇಲ್ಲ. ಇದ್ದರೆ ಅದು ಮೇರಿ ಕೋಮ್ ಮಾತ್ರ. ಅದರಲ್ಲಿ ಕೂಡ ಎರಡು ಬಾರಿ ವಿಶ್ವ ಚಾಂಪಿಯನ್ ಆದದ್ದು ಮದುವೆಯಾಗಿ ಎರಡು ಮಕ್ಕಳಾದ ನಂತರ ಅಂದರೆ ನಂಬಲು ಸಾಧ್ಯವೇ ಇಲ್ಲ. ಮದುವೆ ಆದ ನಂತರ ತಮ್ಮ ಎಲ್ಲಾ ಆಸಕ್ತಿಗಳಿಗೆ ಎಳ್ಳು ನೀರು ಬಿಡುವ ಸಾವಿರಾರು ಹುಡುಗಿಯರಿಗೆ ಆಕೆಯು ನಿಜವಾದ ಮೇಲ್ಪಂಕ್ತಿ. 2012ರ ಒಲಿಂಪಿಕ್ಸ್ ಕಂಚಿನ ಪದಕ ಕೂಡ ಆಕೆ ಗೆದ್ದ ಸಾವಿರ ಸಾವಿರ ಪದಕಗಳ ಜೊತೆಗೆ ಫಳ ಫಳ ಮಿಂಚುತ್ತಿದೆ. ನಿವೃತ್ತಿ ಆಗುವ ಈ ವಯಸ್ಸಿನಲ್ಲಿ ಕೂಡ ಆಕೆ ವಿಶ್ವ ರಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ!
ನೂರಾರು ಮಹೋನ್ನತ ಪ್ರಶಸ್ತಿಗಳು ಆಕೆಯ ಶೋ ಕೇಸಿನಲ್ಲಿ ಈಗಾಗಲೇ ಇವೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ ರತ್ನ… ಹೀಗೆ ಎಲ್ಲವೂ ಆಕೆಗೆ ದೊರೆತಾಗಿದೆ, ಭಾರತ ರತ್ನ ಒಂದು ಬಿಟ್ಟು! ಅದು ಬೇಗ ದೊರೆಯಲಿ ಎಂದು ನಾನು ಆಸೆ ಪಡುತ್ತೇನೆ. ಏನಿದ್ದರೂ ಮೇರಿ ಕೋಮ್ ಎನ್ನುವ ಫೈಟಿಂಗ್ ಸ್ಪಿರಿಟ್ ಇನ್ನು ಮುಂದೆ ಬಾಕ್ಸಿಂಗ್ ರಿಂಗಲ್ಲಿ ಕಾಣಿಸುವುದಿಲ್ಲ ಎನ್ನುವುದೇ ದೊಡ್ಡ ಶೂನ್ಯ ಭಾವ. ಅದನ್ನು ತುಂಬಿಸುವ ಇನ್ನೊಬ್ಬ ಬಾಕ್ಸರ್ ಭಾರತದಲ್ಲಿ ಸದ್ಯಕ್ಕಂತೂ ಕಾಣುತ್ತಿಲ್ಲ. ಮೇರಿ ಕೋಮ್ ನಿಜವಾದ ಭಾರತ ರತ್ನ.
ರಾಜೇಂದ್ರ ಭಟ್
ಶಿಕ್ಷಕರು