ಗಂಗಾವತಿ: ಮಾರುತಿ ವ್ಯಾನ್ ಒಂದು ರಸ್ತೆ ಪಕ್ಕದ ಭತ್ತದ ಗದ್ದೆಗೆ ಬಿದ್ದ ಘಟನೆ ತಾಲೂಕಿನ ಹನುಮನಹಳ್ಳಿ ವಿರೂಪಾಪೂರಗಡ್ಡಿ ಮಧ್ಯೆ ರಸ್ತೆಯಲ್ಲಿ ಬುಧವಾರ ಸಂಜೆ ಜರುಗಿದೆ.
ಹುಬ್ಬಳ್ಳಿ ಮೂಲದವರು ಕಿಷ್ಕಿಂಧಾ ಅಂಜನಾದ್ರಿ ಪ್ರವಾಸಕ್ಕೆ ಆಗಮಿಸಿ ಹುಲಿಗಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರುತಿ ವ್ಯಾನ್ ರಸ್ತೆಯ ತಿರುವಿನಲ್ಲಿ ಆಯಾ ತಪ್ಪಿ ಗದ್ದೆಗೆ ಬಿದ್ದಿದ್ದು ಸ್ಥಳೀಯ ರೈತರು ಕೂಡಲೇ ನೆರವಿಗೆ ಧಾವಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿನ ತಲೆಗೆ ಪೆಟ್ಟು ಬಿದ್ದಿದೆ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಗಂಗಾವತಿ ಹುಲಿಗಿ ರಸ್ತೆ ಅತ್ಯಂತ ಚಿಕ್ಕದ್ದಾಗಿದ್ದು ಕಿಷ್ಕಿಂಧಾ ಅಂಜನಾದ್ರಿ ಹಾಗೂ ಆನೆಗೊಂದಿ ಭಾಗಕ್ಕೆ ದೇಶ ವಿದೇಶದ ಸಾವಿರಾರು ಪ್ರವಾಸಿಗರು ನಿತ್ಯವೂ ವಾಹನಗಳಲ್ಲಿ ಆಗಮಿಸುತ್ತಿದ್ದು ಚಿಕ್ಕ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹಿಟ್ನಾಳ ಕ್ರಾಸ್ ನಿಂದ ಗಂಗಾವತಿ ವರೆಗೆ ಚತುಷ್ಪಥ ರಸ್ತೆ ನಿರ್ಮಿಸುವ ಕುರಿತು ಹಲವು ವರ್ಷಗಳಿಂದ ಪ್ರಸ್ತಾಪವಿದ್ದರೂ ಕಾರ್ಯಗತವಾಗುತ್ತಿಲ್ಲ. ನಿತ್ಯವೂ ರಸ್ತೆ ಅಪಘಾತ ಸಂಚಾರ ದಟ್ಟಣೆ ಯಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.