“ಪೊಗರು’ ಚಿತ್ರದ ಬಳಿಕ ನಟ ಧ್ರುವ ಸರ್ಜಾ “ಮಾರ್ಟಿನ್’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಮಾರ್ಟಿನ್’ ಸಿನಿಮಾದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು, ಇದೇ ವೇಳೆ ಚಿತ್ರತಂಡ “ಮಾರ್ಟಿನ್’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
ಹೌದು, “ಮಾರ್ಟಿನ್’ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುವುದರೊಳಗಾಗಿಯೇ ಚಿತ್ರತಂಡ “ಮಾರ್ಟಿನ್’ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ವರ್ಷ ಸೆಪ್ಟೆಂಬರ್ 30ಕ್ಕೆ “ಮಾರ್ಟಿನ್’ ಅದ್ದೂರಿಯಾಗಿ ತೆರೆಗೆ ಬರಲಿದೆ. “ರಾಮನವಮಿ’ ಹಬ್ಬದ ಸಂದರ್ಭದಲ್ಲಿ “ಮಾರ್ಟಿನ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಅದರೊಂದಿಗೆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಇನ್ನು ಔಟ್ ಆ್ಯಂಡ್ ಔಟ್ ಆ್ಯಕ್ಷನ್ -ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾರ್ಟಿನ್’ ಸಿನಿಮಾದಲ್ಲಿ ನಾಯಕ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉದಯ್ ಕೆ. ಮೆಹ್ತಾ ನಿರ್ಮಾಣದಲ್ಲಿ “ಮಾರ್ಟಿನ…’ ಸಿನಿಮಾ ಮೂಡಿಬರುತ್ತಿದೆ. “ಅದ್ಧೂರಿ’ ಸಿನಿಮಾದ ಬಳಿಕ ಎರಡನೇ ಬಾರಿಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ. ಪಿ ಅರ್ಜುನ್ ಕಾಂಬಿ ನೇಶನ್‌ನಲ್ಲಿ “ಮಾರ್ಟಿನ್’ ಸಿನಿಮಾ ಮೂಡಿಬರುತ್ತಿದೆ.
ಇದನ್ನೂ ಓದಿ:KGF 2 ದಾಖಲೆ; 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಯಶ್ ಸಿನಿಮಾ
ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲೂ “ಮಾರ್ಟಿನ್’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಈಗಾಗಲೇ ಬಿಡುಗಡೆಯಾಗಿರುವ “ಮಾರ್ಟಿನ್’ ಟೈಟಲ್ ಪೋಸ್ಟರ್, ಧ್ರುವ ಸರ್ಜಾ ಗೆಟಪ್ ಮಾಸ್ ಆಡಿಯನ್ಸ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, “ಮಾರ್ಟಿನ್’ ಅಬ್ಬರ ಥಿಯೇಟರ್‌ನಲ್ಲಿ ಹೇಗಿರಲಿದೆ ಅನ್ನೋದು ಸೆ. 30ಕ್ಕೆ ಗೊತ್ತಾಗಲಿದೆ.