ಸದ್ಯಕ್ಕೆ ಡಿಜಿಟಲ್ ವೇದಿಕೆಯದ್ದೇ ಕಾರುಬಾರು. ಕನ್ನಡದಲ್ಲಿ ಈಗಾಗಲೇ ವೆಬ್‌ಸೀರೀಸ್ ಹವಾ ಸಾಕಷ್ಟು ಇದೆ. ಹಾಗೆ ನೋಡಿದರೆ, ಒಂದಷ್ಟು ಹೊಸಬರೇ ವೆಬ್‌ಸೀರೀಸ್ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ. ಆ ಸಾಲಿಗೆ ಈಗ “ಮಂಗಳ ‘ ಹೆಸರಿನ ವೆಬ್‌ಸೀರೀಸ್ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳ ‘ಎಂಬ ಹೆಸರಿನ ವೆಬ್‌ಸೀರೀಸ್ ಇಷ್ಟರಲ್ಲೇ ಚಿತ್ರೀಕರಣಕ್ಕೆ ಹೋಗಲು ಅಣಿಯಾಗುತ್ತಿದೆ.
ಅದಕ್ಕೂ ಮುನ್ನ ಇತ್ತೀಚೆಗೆ “ಮಂಗಳ ‘ ವೆಬ್‌ಸೀರೀಸ್‌ನ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಪೋಸ್ಟರ್‌ಗೆ ಸಾಕಷ್ಟು ಕಾಮೆಂಟ್ಸ್‌ಗಳೂ ಬಂದಿವೆ. ಅಂದಹಾಗೆ, ಈ “ಮಂಗಳ ‘ ವೆಬ್‌ಸೀರೀಸ್‌ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಅವರದೇ. ಜೆ.ಜಿ.ಪ್ರೊಡಕ್ಷನ್ಸ್‌ನಡಿ ಈ ವೆಬ್‌ಸೀರೀಸ್ ನಿರ್ಮಿಸಲಾಗಿದೆ. “ಮಂಗಳ ‘ ಕುರಿತು ಹೇಳುವ ನಿರ್ದೇಶಕ ಪೃಥ್ವಿ ಕುಣಿಗಲ್, “ಸದ್ಯಕ್ಕೆ ಚಿತ್ರೀಕರಣಕ್ಕೆ ಹೊರಡಲು ತಂಡ ಸಜ್ಜಾಗಿದೆ. ಲಾಕ್‌ಡೌನ್‌ನಿಂದಾಗಿ ಒಂದಷ್ಟು ಚಿತ್ರೀಕರಣದ ತಯಾರಿಯಲ್ಲಿದೆ.
ವೆಬ್‌ಸೀರೀಸ್‌ನಲ್ಲಿ ಏಳು ಎಪಿಸೋಡ್‌ಗಳಿರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದೇವೆ. ಮಂಗಳಮುಖಿಯರು ವಾಸ ಮಾಡುವ ಜಾಗಗಳಿಗೆ ಭೇಟಿ ಕೊಟ್ಟು, ಅವರ ಹಾವ-ಭಾವ, ನೋವು-ನಲಿವು ಎಲ್ಲವನ್ನೂ ಒಂದು ವರ್ಷದ ಕಾಲ ಗಮನಿಸಿ, ವೆಬ್‌ಸೀರೀಸ್ ಮಾಡಲು ಮುಂದಾಗಿದ್ದೇನೆ. ಇನ್ನು “ಮಂಗಳ ‘ ಕುರಿತು ಹೇಳುವುದಾದರೆ, ಇದೊಂದು ಥ್ರಿಲ್ಲರ್ ಸ್ಟೋರಿ. ಒಂದು ಮರ್ಡರ್‌ಗೆ ಸಂಬಂಧಿಸಿದಂತೆ ಮಂಗಳ ಮುಖಿ ತಗಲಾಕಿಕೊಳ್ಳುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ.
ಆಮೇಲೆ ಅದರಿಂದ ಆಚೆ ಹೊರಬರುತ್ತಾರೋ, ಇಲ್ಲವೋ ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ. ಇಲ್ಲಿ ಕಾವ್ಯಾ ಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್‌ನಾಥ್ ಸೇರಿದಂತೆ ಹಲವರು ಇರಲಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ ಛಾಯಾಗ್ರಹಣವಿದೆ. ಅದಿಲ್ ನದಾಫ್ ಸಂಗೀತವಿದೆ. ನನ್ನ ಜೊತೆಗೆ ಯೋಗಾನಂದ್, ಪ್ರತಾಪ್ ಅವರು ಮಾತುಗಳನ್ನು ಪೋಣಿಸಿದ್ದಾರೆ. ಇಷ್ಟರಲ್ಲೇ ಮಂಗಳಕ್ಕೆ ಚಾಲನೆ ಸಿಗಲಿದೆ ಎನ್ನುತ್ತಾರೆ ನಿರ್ದೇಶಕ ಪೃಥ್ವಿ ಕುಣಿಗಲ್.