ನಿರ್ದೇಶಕ ನರೇಂದ್ರ ಬಾಬು ಅವರ “ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಂತರ ನಿರ್ದೇಶಿಸಿರುವ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಇದೇ 25 ರಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಅನಂತ್‌ನಾಗ್ ಹಾಗೂ ರಾಧಿಕಾ ಚೇತನ್ ಪ್ರಮುಖ ಪಾತ್ರ ಮಾಡಿದ್ದಾರೆ. ಅನಂತ್‌ನಾಗ್ ಅವರು ವೈಯಕ್ತಿಕವಾಗಿ ತುಂಬಾ ಇಷ್ಟಪಟ್ಟ ಕಥೆಗಳಲ್ಲಿ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕೂಡಾ ಒಂದು.
ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾ ಬಗ್ಗೆ ಸಾಕಷ್ಟು ಎಕ್ಸೆ„ಟ್ ಆಗಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಇಡೀ ಸಿನಿಮಾವನ್ನು ಅನಂತ್‌ನಾಗ್ ಅವರು ಆವರಿಸಿಕೊಂಡಿರುವ ರೀತಿ. “ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಿಗೆ ಹೋಲಿಸಿದರೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ತುಂಬಾ ವಿರಳವಾದ ಕಥೆ. ಈ ಶೇಡ್‌ನಲ್ಲಿ ಕಥೆ ಬಂದಿಲ್ಲ. ಈ ಸಿನಿಮಾ ಯಾವ ಜಾನರ್‌ಗೆ ಸೇರುತ್ತದೆ ಮತ್ತು ಸೇರಿಸಬೇಕು ಎಂಬುದು ನನಗೆ ಗೊತ್ತಿಲ್ಲ.
ಸಿನಿಮಾ ನೋಡಿ ಪ್ರೇಕ್ಷಕರೇ ನಿರ್ಧರಿಸಬೇಕು. ಒಂದಂತೂ ಹೇಳಬಲ್ಲೆ, ಅನಂತ್‌ನಾಗ್ ಅವರು ತುಂಬಾ ಇಷ್ಟಪಟ್ಟ ಕಥೆ. ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಷ್ಟೂ ಸಿನಿಮಾಗಳ ಅನುಭವ ಸಿನಿಮಾದ ಪ್ರತಿ ಜಾಗದಲ್ಲೂ, ಸ್ಕ್ರಿಪ್ಟ್ನ ಪ್ರತಿ ಹಂತದಲ್ಲೂ ಸಂಚರಿಸಿದೆ’ ಎನ್ನುವುದು ನರೇಂದ್ರ ಬಾಬು ಮಾತು. ನರೇಂದ್ರ ಬಾಬು ಈ ಬಾರಿ ಎರಡು ಜನರೇಶನ್‌ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.
ಬೇರೆ ಬೇರೆ ಯೋಚನೆಯ, ತಮ್ಮದೇ ಆದ ಸಿದ್ಧಾಂತವನ್ನು ನಂಬಿಕೊಂಡಿರುವ ಎರಡು ಜನರೇಶನ್‌ಗಳು ಒಟ್ಟಾದಾಗ ಆ ಜರ್ನಿ ಹೇಗಿರುತ್ತದೆ ಎಂಬುದನ್ನು ಹೇಳಿದ್ದಾರಂತೆ. “ಇಲ್ಲಿ ಎರಡು ಜನರೇಶನ್‌ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ದಾಂಪತ್ಯವೇ ದೇವರು ಎಂದು ನಂಬುವ ವ್ಯಕ್ತಿ ಅನಿವಾರ್ಯವಾಗಿ ಕಾರ್ಪೋರೇಟ್ ಸಂಸ್ಥೆಯಲ್ಲಿ, ತನಗಿಂತ ಚಿಕ್ಕ ವಯಸ್ಸಿನ, ಲೀವಿಂಗ್ ರಿಲೇಶನ್‌ಶಿಪ್ ಬಗ್ಗೆ ಆಕರ್ಷಣೆ ಹೊಂದಿರುವ ಹುಡುಗಿಯ ಕೈ ಕೆಳಗೆ ಕೆಲಸ ಮಾಡುವ ಸಂದರ್ಭ ಬಂದಾಗ ಅಲ್ಲಿನ ವಾತಾವರಣ ಹೇಗಿರುತ್ತದೆ,
ಸರಿ ತಪ್ಪುಗಳ ನಡುವಿನ ಜರ್ನಿಯಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುವ ನರೇಂದ್ರ ಬಾಬು ಇಲ್ಲಿ, ಯಾವುದೇ ಸಂದೇಶ ಹೇಳುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ. ನರೇಂದ್ರ ಬಾಬು ಈ ಸಿನಿಮಾ ಬಗ್ಗೆ ಖುಷಿಯಾಗಲು ಕಾರಣ, ಯಾವುದೇ ರಾಜಿಯಾಗದೇ ಸಿನಿಮಾ ಮಾಡಿದ್ದು. ಸಿನಿಮಾದಲ್ಲಿ ಏನೇನು ಮಾಡಬೇಕೆಂದು ಬಯಸಿದ್ದರೋ ಅವೆಲ್ಲವನ್ನು ತೆರೆಮೇಲೆ ತರುವ ಅವಕಾಶ ಇಲ್ಲಿ ಸಿಕ್ಕಿತಂತೆ.
ಜೊತೆಗೆ ಕಥೆ ಕೇಳಿ ಅನಂತ್‌ನಾಗ್ ಅವರು ಸ್ಕಿಪ್ಟ್ನಲ್ಲಿ ತೊಡಗಿಸಿಕೊಂಡ ರೀತಿ ಕೂಡಾ ನರೇಂದ್ರ ಅವರು ಅವರಿಗೆ ಸಿನಿಮಾದ ಮೇಲಿನ ವಿಶ್ವಾಸ ಹೆಚ್ಚಿಸಿದೆ. “ಮೊದಲ ಹಂತದ ಸ್ಕ್ರಿಪ್ಟ್ ಮಾಡಿ, ಅನಂತ್‌ನಾಗ್ ಅವರಿಗೆ ಕೊಟ್ಟೆ. ಇನ್ನೂ ಫೈನಲ್ ಆಗಿರಲಿಲ್ಲ. ಏನು ಬೈಯ್ಯುತ್ತಾರೋ ಎಂದು ಭಯದಲ್ಲಿದ್ದೆ. ಆದರೆ, ಅನಂತ್‌ನಾಗ್ ಅವರು ಆ ಸ್ಕ್ರಿಪ್ಟ್ಗೆ ಒಂದು ಅಂತಿಮ ರೂಪ ಕೊಟ್ಟರು. ಎಲ್ಲೆಲ್ಲಿ ಏನೇನೋ ಬೇಕಿತ್ತೋ ಅವೆಲ್ಲವನ್ನು ನೀಟಾಗಿ ಮಾಡಿಕೊಟ್ಟರು. ಆ ನಂತರ ಚಿತ್ರೀಕರಣಕ್ಕೆ ಹೋದೆವು’ ಎನ್ನುವುದು ನರೇಂದ್ರ ಬಾಬು ಮಾತು.