ದಾವಣಗೆರೆ: ಭಾರತರತ್ನ, ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ರವರ 126ನೇ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂರವರ 110ನೇ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ)ಯಿಂದ ಶುಕ್ರವಾರ ಎಸ್‌ಪಿಎಸ್ ನಗರದ ಬೂದಾಳ್ ರಸ್ತೆಯಲ್ಲಿ ಏರ್ಪಡಿಸಿದ್ದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ 52 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.
ನೂತನ ವಧು-ವರರನ್ನ ಶುಭಕೋರಿ ಮಾತನಾಡಿದ ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಇಂದಿನ ವಾತಾವರಣದಲ್ಲಿ ದುಂದು ವೆಚ್ಚ ನಿಲ್ಲಿಸಿ, ಸರಳ ಸಾಮೂಹಿಕ ವಿವಾಹ ಆಗುವುದು ಒಳ್ಳೆಯದು. ಆಡಂಬರದ ಮದುವೆಯಾದವರು ಜೀವನಪೂರ್ತಿ ಸುಖವಾಗಿ ಇರುತ್ತಾರೆ ಎನ್ನಲಿಕ್ಕಾಗದು.
ಆಡಂಬರದ ಮದುವೆಗೆ ಖರ್ಚು ಮಾಡುವ ಹಣವನ್ನೇ ಬೇರೆ ಕಾರ್ಯಕ್ಕೆ ಬಳಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಮೇಲಾಗಿ ಸರಳ ಸಾಮೂಹಿಕ ವಿವಾಹ ಮಹೋತ್ಸವ ಹೆಚ್ಚಾಗಿ ನಡೆಯುವಂತಾಗಬೇಕಿದೆ ಎಂದು ಆಶಿಸಿದರು. ವಧು-ವರರು ಪರಸ್ಪರ ಒಬ್ಬರನ್ನು ಒಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಹೊಂದಾಣಿಕೆ ಜೀವನ ನಡೆಸಬೇಕು.
ಎಂತದ್ಧೇ ಸಂದರ್ಭದಲ್ಲಿ ವೈಮನಸ್ಸಿಗೆ ಅವಕಾಶ ಕೊಡದೆ ಸಾಮರಸ್ಯದಿಂದ ಬಾಳಬೇಕು. ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಬೆಳೆಸಬೇಕು ಎಂದು ತಿಳಿಸಿದರು. ಮಿಲ್ಲತ್ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸೈಪುಲ್ಲಾ ಮಾತನಾಡಿ, ಅನೇಕ ಪೋಷಕರು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡಿ ಕಷ್ಟಪಡುವುದನ್ನ ಕಾಣುತ್ತೇವೆ.
ಒಂದು ಮದುವೆ ಮಾಡಬೇಕು ಎಂದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅದ್ಧೂರಿ ಬದಲಿಗೆ ಸರಳ ಸಾಮೂಹಿಕ ಮದುವೆಯಾಗುವ ಮೂಲಕ ಅದ್ಧೂರಿ ಜೀವನ ನಡೆಸಬೇಕು. ಅನಗತ್ಯ ದುಂದುವೆಚ್ಚ ತಡೆಯುವ ಮತ್ತು ಮಕ್ಕಳು ಸಂತೋಷವಾಗಿರಲು ಸರಳ ಸಾಮೂಹಿಕ ಮದುವೆ ಮಾಡಬೇಕು.
ಸಂಘ- ಸಂಸ್ಥೆಗಳು ಇಂತಹ ಒಳ್ಳೆಯ ಕಾರ್ಯಕ್ಕೆ ಹೆಚ್ಚು ಗಮನ ನೀಡಬೇಕು ಎಂದರು. ಯುವ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್ ಮಾತನಾಡಿ, ಹಿಂದುಳಿದವರನ್ನ ಮಾತ್ರವಲ್ಲ ಅಕ್ಷರ ಜ್ಞಾನ ಇಲ್ಲದವರನ್ನೂ ಸಹ ಹೆಚ್ಚಿನ ಶೋಷಣೆಗೆ ಒಳಪಡಿಸಲಾಗುತ್ತದೆ. ನಮಗೆ ಆಗುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಲು ನಾವು ಮೊದಲು ಶಿಕ್ಷಣವಂತರಾಗಬೇಕು.
ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು. ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಸಾನ್ನಿಧ್ಯ, ಸಂಘಟನೆ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಗುಡ್ಡಪ್ಪ, ಎಚ್.ಸಿ. ಮಲ್ಲಪ್ಪ, ಎಂ. ರುದ್ರೇಶ್, ಎ.ಕೆ. ಬಸವರಾಜ್, ಟಿ. ಹನುಮಂತಪ್ಪ ಇತರರು ಇದ್ದರು.