ಮೈಸೂರು: ಅಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮನೆ ಮಂದಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಚಿತ್ರವೆಂದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ 85 ವರ್ಷ, ವಧುವಿಗೆ 65 ವರ್ಷ. ಈ ಹಿರಿಯರ ಮಧುವೆಗೆ ಸಾಕ್ಷಿಯಾಗಿದ್ದು ನಗರದ ಉದಯಗಿರಿಯ ಗೌಸಿಯಾ ನಗರ.
ಗೌಸಿಯಾನಗರದ ಹಾಜಿ ಮುಸ್ತಫಾ (85 ವ) ಹಾಗೂ ಫಾತಿಮಾ ಬೇಗಂ (65 ವ) ಸತಪತಿಗಳಾದ ಜೋಡಿ. ಕುಟುಂಬಸ್ಥರ ಸಮ್ಮುಖದಲ್ಲಿ ಇವರುಗಳು ಮನೆಯಲ್ಲೇ ಮದುವೆಯಾಗಿದ್ದಾರೆ.
ಕುರಿ ಸಾಕಾಣಿಕೆ ಮಾಡಿ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ ಅವರ ಪತ್ನಿ ಖುರ್ಷಿದ್ ಬೇಗಂ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಮಕ್ಕಳಿಗೆಲ್ಲಾ ಮದುವೆ ಮಾಡಿದ್ದರಿಂದ ಮುಸ್ತಫಾ ಅವರು ಗೌಸಿಯಾ ನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ:ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ
ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ಮುಸ್ತಾಫಾ ಅವರಿಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ಫಾತಿಮಾ ಬೇಗಂ ಅವರು ಕಣ್ಣಿಗೆ ಬಿದ್ದಿದ್ದರು. ತನ್ನ ಮನದಿಚ್ಛೆಯನ್ನು ಮಸ್ತಾಫಾ ಅವರು ಫಾತಿಮಾ ಬೇಗಂಗೆ ಹೇಳಿದ್ದರು. ಮುಸ್ತಫಾಗೆ ನಿರಾಸೆ ಮಾಡದ ಫಾತಿಮಾ, ಮದುವೆಯಾಗಲು ಒಪ್ಪಿಗೆ ನೀಡಿದ್ದರು.
ಇದರಂತೆ ಇಂದು ವಿವಾಹವಾದ ದಂಪತಿಗೆ ಮುಸ್ತಾಫಾ ಮಕ್ಕಳು ಶುಭಹಾರೈಸಿದ್ದಾರೆ. ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದರೂ ತಂದೆಯ ನಿರ್ಧಾರಕ್ಕೆ ಮಕ್ಕಳು ಜೈ ಎಂದು ನಿಖಾ ಮಾಡಿದ್ದಾರೆ. ಹೀಗಾಗಿ ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾ ಬೇಗಂರನ್ನು ಮುಸ್ತಾಫಾ ವರಿಸಿದ್ದಾರೆ.