Advertisement

ಅನಾಥ ಯುವತಿಗೆ ವಿವಾಹ ಯೋಗ : ಹೆತ್ತವರ ಸ್ಥಾನದಲ್ಲಿ ನಿಂತ ಸರಕಾರ

09:28 AM Oct 18, 2022 | Team Udayavani |

ಉಡುಪಿ : ಜಿಲ್ಲೆಯಲ್ಲೊಂದು ಮಾದರಿ ವಿವಾಹ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ. ಇಲ್ಲಿ ಸರಕಾರವೇ ಕುಟುಂಬದ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಮಹಿಳಾ ನಿಲಯದ ಹೆಣ್ಣೊಬ್ಬಳ ಕೌಟುಂಬಿಕ ಬದುಕಿನ ಭವಿಷ್ಯ ರೂಪಿಸಲು ಮುಂದಾಗಿರುವುದು ವಿಶೇಷ.

Advertisement

ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ 25ರ ಹರೆಯದ ಯುವತಿಗೆ ವಿವಾಹ ಯೋಗ ಕೂಡಿಬಂದಿದೆ. ಹೊರ ಜಿಲ್ಲೆಯ ಕೃಷಿ ಕುಟುಂಬದ ಹಿನ್ನೆಲೆಯ 29ರ ಹರೆಯದ ಯುವಕ ವರ.

ಯುವಕನೇ ಮದುವೆಯ ಪ್ರಸ್ತಾವ ಇಟ್ಟಿದ್ದು, ಆತನ ಜಿಲ್ಲೆಯ ಅಧಿಕಾರಿಗಳ ಮೂಲಕ ಯುವಕನ ಗುಣ-ನಡತೆ, ಕುಟುಂಬಿಕರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಈ ವರದಿಗಳನ್ನು ರಾಜ್ಯ ಮಹಿಳಾ ನಿಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಆಗಿರುವ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ಅನುಮೋದನೆ ನೀಡಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ವಿವಾಹಕ್ಕೆ ಒಪ್ಪಿಗೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಾಹ ಖರ್ಚಿಗೆ 5 ಸಾವಿರ ರೂ. ನೀಡಲಾಗುತ್ತದೆ. 15 ಸಾವಿರ ರೂ.ಗಳನ್ನು ಯುವತಿಯ ಹೆಸರಿನಲ್ಲಿ ಸರಕಾರ ಠೇವಣಿ ಇಡುತ್ತದೆ. ದಾನಿಗಳೂ ನೆರವಿಗೆ ಮುಂದೆ ಬಂದಿದ್ದು, ಜ್ಯೇಷ್ಠ ಡೆವಲಪರ್ಸ್‌ ಸಂಸ್ಥೆಯು ಯುವತಿಗೆ ಕರಿಮಣಿ ಸರ, ಮದುವೆಯ ಸೀರೆ ನೀಡಲಿದೆ. ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್‌ ಯುವತಿಗೆ ಜವುಳಿಯನ್ನು ನೀಡಲಿದ್ದಾರೆ. ಅಂಬಲಪಾಡಿ ದೇವಸ್ಥಾನದಿಂದ ಮಧ್ಯಾಹ್ನದೂಟದ ವ್ಯವಸ್ಥೆಯಾಗಿದೆ. ಮಹಿಳಾ ನಿಲಯದ ಎಲ್ಲ ನಿಲಯಾರ್ಥಿಗಳು, ಸಿಬಂದಿ, ಅಧಿಕಾರಿ ವರ್ಗ ಪ್ರಸ್ತುತ ಮದುವೆ ತಯಾರಿಯಲ್ಲಿ ಸಂಭ್ರಮದಿಂದ ತೊಡಗಿಸಿಕೊಂಡಿದ್ದಾರೆ.

ಆಮಂತ್ರಣ ಪತ್ರಿಕೆಯ ವಿಶೇಷ
ಕರ್ನಾಟಕದ ಸರಕಾರದ ಲಾಂಛನ, ಆದಿ ಪೂಜಿತ ಗಣಪತಿ ದೇವರ ಚಿತ್ರದೊಂದಿಗೆ ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯ, ಉಡುಪಿ ಆಯೋಜಕರು. ವಧು-ವರನ ಹೆಸರು ಮುದ್ರಿಸಿ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಸಮಾರಂಭವು ಅ. 28ರಂದು ಶುಭ ಮುಹೂರ್ತದಲ್ಲಿ ನೆರವೇರಲಿದೆ ಎಂದು ಬರೆದಿದೆ. ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ರಾಜ್ಯ ಮಹಿಳಾ ನಿಲಯ ಅಧೀಕ್ಷಕರು ಶುಭಾಕಾಂಕ್ಷಿಗಳಾಗಿದ್ದಾರೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಣ ಪತ್ರಿಕೆ ಕಳುಹಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ನಿಲಯದ ವತಿಯಿಂದ ಪ್ರಸ್ತಾವ ಪರಿಶೀಲಿಸಿ ವಿವಾಹ ನೆರವೇರಿಸುವ ಬಗ್ಗೆ ವರದಿ ನೀಡಿದ್ದರು. ಅದರಂತೆ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಸಮಿತಿ ಒಪ್ಪಿಗೆ ನೀಡಲಾಗಿದೆ.
– ಕೂರ್ಮಾ ರಾವ್‌ ಎಂ. ಉಡುಪಿ ಜಿಲ್ಲಾಧಿಕಾರಿ

ಮದುವೆ ಪ್ರಸ್ತಾವ ಬಂದ ಅನಂತರ 6 ತಿಂಗಳು ಕಾಲ ಎಲ್ಲ ಬಗೆಯ ಪರಿಶೀಲನೆ, ಪ್ರಕ್ರಿಯೆ ನಡೆದಿದೆ. ನಿಟ್ಟೂರು ಮಹಿಳಾ ನಿಲಯದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ವಿವಾಹ ಸಮಾರಂಭ ಜರಗಲಿದೆ.
-ವೀಣಾ ವಿವೇಕಾನಂದ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ

ಇದನ್ನೂ ಓದಿ : ಮಲ್ಪೆ : ಕೋಸ್ಟ್‌ಗಾರ್ಡ್‌ ಬೋಟ್‌ ಚಲಿಸಿ 8 ಲಕ್ಷ ರೂ. ಬೆಲೆಯ ಬಲೆ ನಾಶ

Advertisement

Udayavani is now on Telegram. Click here to join our channel and stay updated with the latest news.

Next