ತಿಪಟೂರು: ಹದಿಹರೆಯದ ಮಕ್ಕಳು ತಪ್ಪು ದಾರಿ ಹಿಡಿಯುತ್ತಾರೆಂಬ ಭಯದಿಂದ ಪೋಷಕರೇ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲು ಮುಂದಾಗುತ್ತಿದ್ದಾರೆ. ಈ ಭಯವನ್ನು ಹೋಗಲಾಡಿಸಬೇಕು. ಇದಕ್ಕಾಗಿ ಪೋಷಕರ ನಂಬಿಕೆ ಉಳಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು ಮಕ್ಕಳ ಸಹಾಯವಾಣಿ ನಿರ್ದೇಶಕ ಬಿ.ಎಸ್. ನಂದಕುಮಾರ್ ತಿಳಿಸಿದರು.
ನಗರದ ಮೆಟ್ರಿಕ್ ನಂತರದ ಹಾಸ್ಟಲ್ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಕೀಲರ ಸಂಘ ಮತ್ತು ಬದುಕು ಸಂಸ್ಥೆ ತಿಪಟೂರು ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.
ಬಾಲ್ಯ ವಿವಾಹದಿಂದ ಶಿಶು ಮರಣ, ತಾಯಿ ಮರಣ ಹಾಗೂ ಅಂಗವಿಕಲ ಮಕ್ಕಳು ಹುಟ್ಟುವುದು ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಬಾಲ್ಯವಿವಾಹವನ್ನು ಸಂಪೂರ್ಣ ತಡೆಗಟ್ಟಬೇಕು. ಬಾಲ್ಯ ವಿವಾಹ ಮಾಡಿದರೆ ಬಾಲಕಿ ತಂದೆ, ಹುಡುಗನ ತಂದೆ, ಮದುವೆ ಮಾಡಿಸಿದವರಿಗೆ ಹಾಗೂ ಪ್ರೋತ್ಸಾಹ ನೀಡಿದವರಿಗೆ ಎರಡು ವರ್ಷ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಲಾಗುತ್ತದೆ. ಇದು ಜಾಮೀನು ರಹಿತ ಅಪರಾಧ. ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕೊÕ) ಅಡಿ 10 ವರ್ಷ ಕಠಿಣ ಶಿಕ್ಷೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಿಡಿಪಿಒ ಓಂಕಾರಪ್ಪ, ನಾಲ್ಕು ವರ್ಷಗಳಿಂದ ಸುಮಾರು 52 ಬಾಲ್ಯ ವಿವಾಹಗಳನ್ನು ನಮ್ಮ ತಾಲೂಕಿನಲ್ಲಿ ತಡೆಗಟ್ಟಲಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಆಗದಂತೆ ಜನರು ನಿರ್ಧರಿಸಬೇಕು. ಇತರರಿಗೂ ತಿಳಿಸಬೇಕೆಂದು ಕರೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಡೇನೂರು ಬಸಪ್ಪ ಮಾತನಾಡಿ, ಹಿಂದಿನ ಪದ್ಧತಿಯನ್ನು ಬಿಟ್ಟು ಇಂದಿನ ವಾಸ್ತವಿಕ ಆಧಾರದ ಮೇಲೆ ಜೀವನ ಕಟ್ಟಿಕೊಳ್ಳಬೇಕು. ಬಾಲ್ಯವಿವಾಹವಾದರೆ ಕಾನೂನಿಡಿ ಶಿಕ್ಷೆಯಾಗುತ್ತದೆ. ಬಾಲ್ಯ ವಿವಾಹಗಳು ಕಂಡುಬಂದರೆ ಯಾವುದೇ ಇಲಾಖೆಗಳಿಗೆ ಮಾಹಿತಿ ನೀಡಿ ಕೇಂದ್ರ ಸರ್ಕಾರದ ಉಚಿತ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಶಿವಮ್ಮ ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಹನುಮಂತಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಉತ್ತಮ ನಡವಳಿಕೆಗಳನ್ನು ಕಲಿಸುತ್ತವೆ.
ನಮ್ಮ ಹಾಸ್ಟೆಲ್‌ಗಳಲ್ಲಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಎಂಬ ಸ್ವಾಮಿ ವಿವೇಕನಂದರ ವಾಣಿಯನ್ನು ಹೇಳಿದರು. ಮಕ್ಕಳ ಸಹಾಯ ವಾಣಿಯ ಮೋಹನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮಂಜುಳಾದೇವಿ, ಗೌರವ್ವ ಎಣ್ಣಿ, ವಾರ್ಡನ್ ಸುಮಂಗಳಮ್ಮ, ಬಾಲಕೃಷ್ಣ ಮತ್ತಿತರರಿದ್ದರು.