ಬರಗೂರು: ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಯುವಕನಿಗೆ ಪೊಲೀಸರು ಗ್ರಾಮಸ್ಥರ ಸಮ್ಮುಖದಲ್ಲಿ ತಾಳಿಕಟ್ಟಿಸಿದ ಘಟನೆ ಶನಿವಾರ ಬರಗೂರಿನ ಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದೆ. ಶಿರಾ ತಾಲೂಕಿನ ಬರಗೂರಿನಲ್ಲಿ ಕೂಲಿ ಕೆಲಸಗಾರರಿಗೆ ಅಡಿಗೆ ಮಾಡಲು ಬಂದಿದ್ದ ದಾವಣಗೆರೆ ಜಿಲ್ಲೆಯ ದಾಸನಕೊಪ್ಪ ಗ್ರಾಮದ ಯುವಕ ರಾಜು ಎಂಬುವನು ಅದೇ ಜಿಲ್ಲೆಯ ಕಲಗಟಕಿ ಗ್ರಾಮದ ಯುವತಿ ಶಿಲ್ಪಾ ಎಂಬುವಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹಲವು ತಿಂಗಳಿಂದ ಧಾರವಾಡದಿಂದ ಬರಗೂರು ಸಮೀಪದ ಹಲವು ಗ್ರಾಮಗಳಲ್ಲಿ ಕದ್ದು-ಮುಚ್ಚಿ ಓಡಾಡುತ್ತಿದ್ದರು. ಕೊನೆಗೆ
ಕರಿರಾಮನಹಳ್ಳಿಯ ಮನೆ ಯೊಂದರಲ್ಲಿ ರಾತ್ರಿ ವೇಳೆ ಮಲಗಲು ಸ್ಥಳಾವಕಾಶ ಕೊಡಿ ಎಂದು 2ಬಾರಿ ತಂಗಿದ್ದ ಯುವತಿ ಶಿಲ್ಪಾಳ ಮೇಲೆ ಅನುಮಾನ ಗೊಂಡ ಗ್ರಾಮಸ್ಥರು ಬರಗೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪ್ರಶ್ನಿಸಿದಾಗ ನಾನು ಪ್ರೀತಿಸಿಲ್ಲ. ಮದುವೆಯಾಗುವುದಿಲ್ಲ ಎಂದಿದ್ದಾನೆ.
ಇದನ್ನೂ ಓದಿ:ಅಮಿತ್ ಶಾ ವಿರುದ್ಧ ರೈತರ ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಯುವಕ- ಯುವಿತಿ ತಂದೆ ತಾಯಿಯ ಒಪ್ಪಿಗೆ ಮೇರೆಗೆ ಪೋಲೀಸರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ಮಾಡಲಾಯಿತು. ಇದಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿ, ವಧುವಿಗೆ ಬಂಗಾರದ ತಾಳಿ, ವಧು, ವರರಿಗೆ ವಸ್ತ್ರಗಳು, ಹೂವಿನಹಾರ ಸೇರಿದಂತೆ ಶಾಸ್ತ್ರೋಕ್ತವಾಗಿ ಬರಗೂರಿನ ಶ್ರೀಲಕ್ಷ್ಮೀ ದೇಗುಲದಲ್ಲಿ ವಿವಾಹ ನೆರವೇರಿಸಿದರು. ಪೋಲೀಸ್ ಎಎಸ್‌ಐ ಮುದ್ದರಂಗಪ್ಪ, ಗ್ರಾಮದ ಮುಖಂಡರಾದ ಹಲುಗುಂಡೇಗೌಡ, ಪೇದೆಗಳಾದ ಸಂಜು ಕುಮಾರ್, ಹೋಮ್ ಗಾರ್ಡ್ ಉಮೇಶ್, ಗ್ರಾಮಸ್ಥರಾದ ಬಿ.ಸಿ.ಸತೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.