Advertisement

ಅಂಕಗಳು ಕಡಿಮೆ ಎಂಬ ಅಂಜಿಕೆಯೇಕೆ

07:43 PM Aug 18, 2020 | Suhan S |

ಅವರ ಮಗನಿಗೆ ಅಷ್ಟು ನಂಬರ್‌ ಬಂದಿದೆಯಂತೆ, ಇವರ ಮಗಳಿಗೆ ಎಲ್ಲದರಲ್ಲೂ ಔಟ್‌ ಆಫ್ ಔಟ್‌ ಅಂತೆ… ಈಗ ಎಲ್ಲೆಲ್ಲೂ ಇಂಥ ಮಾತುಗಳೇ ಕೇಳತೊಡಗಿವೆ. ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಅನ್ನುವಂತೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶ ಬಂದು ಆಗಲೇ ವಾರ ಕಳೆದರೂ, “”ಮಾರ್ಕ್ಸ್ ವಾದಿ”ಗಳ ಮಾತು ನಿಂತಿಲ್ಲ. ಇಂಥ ಸಂದರ್ಭದಲ್ಲಿ, ಚಿತ್ರ ಸಾಹಿತಿ ಕವಿರಾಜ್ ಅಂಕ ಗಳಿಕೆಗೆ ಸಂಬಂಧಿಸಿದಂತೆ ತಮ್ಮ  ಬದುಕಿನ ಕಥೆ ಹೇಳುತ್ತಲೇ, ಅಂಕಗಳೇ ಎಲ್ಲವೂ ಅಲ್ಲ ಎಂಬುದನ್ನು ವಿವರಿಸಿ ಹೇಳಿದ್ದಾರೆ…

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶ ಬಂದು ವಾರ ಕಳೆದಿದೆ. ಮುಂದೆ ಯಾವ ಕೋರ್ಸ್‌ ಮಾಡಿದರೆ ಸೂಕ್ತ ಎಂದು ವಿದ್ಯಾರ್ಥಿಗಳೂ, ಅವರ ಪೋಷಕರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಹತ್ತು ಹಲವು ಮಂದಿಯ ಸಲಹೆ ಕೇಳುತ್ತಿದ್ದಾರೆ. ಐದಾರು ಕಾಲೇಜುಗಳ ಹೆಸರನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ.ಅಕಸ್ಮಾತ್‌ ಈ ಕಾಲೇಜಲ್ಲಿ ಸಿಗದಿದ್ದರೆ, ಆ ಕಾಲೇಜಲ್ಲಾದರೂ ಸಿಗಲಿ ಎಂಬ ದೂರಾಲೋಚನೆ ಎಲ್ಲರದ್ದೂ ಆಗಿದೆ. ಈ ಮಧ್ಯೆ ಎಷ್ಟೋ ಮಕ್ಕಳಿಗೆ, ತಾವು ಅಂದುಕೊಂಡಷ್ಟೇ ಅಂಕಗಳು ಅಥವಾ ಊಹಿಸಿದ್ದಕ್ಕಿಂತ ಒಂದಷ್ಟು ಜಾಸ್ತಿಯೇ ಅಂಕಗಳು, ರ್‍ಯಾಂಕ್‌ ಬಂದು ಖುಷಿಯಾಗಿದೆ. ಇನ್ನು ಹಲವರಿಗೆ, ಅಂದುಕೊಂಡಷ್ಟು ಅಂಕಗಳು ಬರದೇ ತೀರಾ ನಿರಾಸೆ, ಹತಾಶೆ ಆವರಿಸಿದೆ.ಒಂದು ಹೆಣ್ಣುಮಗುವಂತೂ, ನನಗೆ 624ರ ಬದಲು 625 ಅಂಕಗಳೇ ಬರಬೇಕು ಎಂದು ಮರುಮೌಲ್ಯ ಮಾಪನಕ್ಕೆ ಅರ್ಜಿ ಹಾಕಿರುವ ಸುದ್ದಿಯೂ ಬಂದಿದೆ.

ಪ್ರತಿ ವರ್ಷ SSLC ರಿಸಸ್ಟ್ ಬಂದಾಗೆಲ್ಲಾ, ನನ್ನ SSLC ಫ‌ಲಿತಾಂಶ ಬಂದಾಗಿನ ಘಟನೆ ನನ್ನನ್ನು ಯಾವಾಗಲೂ ಕಾಡುತ್ತದೆ. ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ, ಒಂದರಿಂದ ಹತ್ತನೇ ತರಗತಿವರೆಗೆ, ಕಾಯಂ ಆಗಿ ನನಗೆ ನನ್ನ ಶಾಲೆಯಲ್ಲಿ ಮೊದಲ ರ್‍ಯಾಂಕ್‌ ಕಟ್ಟಿಟ್ಟಬುತ್ತಿಯಾಗಿತ್ತು. ಪುಸ್ತಕದಲ್ಲಿ ಇರುವುದನ್ನೆಲ್ಲಶಿಕ್ಷಕರು ಪಾಠ ಮಾಡುವ ಮೊದಲೇ ಅರೆದು ಕುಡಿದು ಬಿಟ್ಟಿರುತ್ತಿದ್ದೆ. ಪಾಠ ಮಾಡುವ ಸಮಯದಲ್ಲಿ ಅಕಸ್ಮಾತ್‌ ಶಿಕ್ಷಕರು ತಪ್ಪಾಗಿ ಹೇಳಿದರೆ, ಆ ಕ್ಷಣ ಅವರೊಂದಿಗೆ ವಾದಿಸಿ ನಾನು ಹೇಳ್ಳೋದೇ ಸರಿ ಅಂತ ಸಾಧಿಸಿ ಗೆಲ್ಲೊಂದರಲ್ಲಿ ಒಂದು ಕಿಕ್‌ ಸಿಗುತ್ತಿತ್ತು ನನಗೆ. ಹೈಸ್ಕೂಲ್‌ ಓದುವ ದಿನಗಳಲ್ಲಿ, ಯಾರಾದರೂ ಶಿಕ್ಷಕರು ಗೈರುಹಾಜರಿಯಿದ್ದರೆ, ಆ ಪೀರಿಯಡ್‌ ನಲ್ಲಿ ನಾನೇ ಪಾಠ ಮಾಡಿಬಿಡುತ್ತಿದ್ದೆ. ನಾನು ಶಾಲೆಯಿಂದ ನಿರ್ಗಮಿಸಿದ ಬಳಿಕ, ನನ್ನ ಒಂದಿಬ್ಬರು ಶಿಕ್ಷಕರು ಈ ವಿಚಾರವಾಗೇ ಆಗಾಗ ನನ್ನ ಜೂನಿಯರ್ಸ್‌ ಬಳಿ- ಕವಿರಾಜ್‌ ಇರುವಾಗ ನಾವು ಪಾಠ ಮಾಡಲಿಕ್ಕೆ ಬರೋ ಮೊದಲು ಮನೇಲಿ ಪ್ರಿಪೇರ್‌ ಆಗಿ ಬರುತಿದ್ರು. ಕವಿರಾಜ್‌ ಯಾವ್ಯಾವ ಪ್ರಶ್ನೆ ಕೇಳಿ, ಎಲ್ಲಿ ನಮ್ಮನ್ನ

ಹಿಡಿದುಹಾಕುತ್ತಾನೋ ಅನ್ನೋ ಭಯ ಇರ್ತಿತ್ತು ಅಂತ ಹೇಳಿದ್ದರಂತೆ. ಹಾಗಂತ, ನನ್ನ ಜೂನಿಯರ್‌ ಆಗಿದ್ದ, ನನ್ನ ತಂಗಿಯೇ ಮನೆಯಲ್ಲಿ ಹೇಳುತ್ತಿದ್ದಳು. ಆ ಮಟ್ಟಿಗೆ ನಾನು ಓದುವುದರಲ್ಲಿ ಮುಂದಿದ್ದೆ. 94 – 95% ಪರ್ಸೆಂಟಿಗಿಂತ ಕಡಿಮೆ ಅಂಕ ಬಂದಿದ್ದು ನನ್ನ ಹಿಸ್ಟರಿಯಲ್ಲೇ ಇರಲಿಲ್ಲ. ಇವೆಲ್ಲ ಕಾರಣಗಳಿಂದ, SSLC ಪಬ್ಲಿಕ್‌ ಪರೀಕ್ಷೆಯಲ್ಲಿ ನಾನು ರಾಜ್ಯ ಮಟ್ಟದಲ್ಲಿ ರ್‍ಯಾಂಕ್‌ ಬರುತ್ತೇನೆಂದು ಇಡೀ ಊರಿಗೆ ಊರೇ ನಂಬಿತ್ತು. ಆದರೆ, ರಿಸಲ್ಟ್ ಬಂದಾಗ ನನಗೆ ಶಾಕ್‌ ಕಾದಿತ್ತು. 560ರಿಂದ 580 ಅಂಕ ನಿರೀಕ್ಷಿಸಿದವನಿಗೆ 480 ಅಂಕ ಮಾತ್ರ ಬಂದಿತ್ತು. ನಾನು ನಿದ್ದೆ ಗಣ್ಣಲ್ಲೂ ತಪ್ಪು ಬರೆಯಲು ಸಾಧ್ಯವಿಲ್ಲದ ಕನ್ನಡದಲ್ಲಿ

125ಕ್ಕೆ 90+ ಅಂಕ ಬಂದಿತ್ತು.

Advertisement

ಬಹುತೇಕ ಅದರಲ್ಲೇ 30 + ಅಂಕಗಳು ಕಡಿಮೆಯಾದ್ದವು. (ಆನಂತರ ಸೆಕೆಂಡ್‌ ಪಿಯುಸಿ ಕನ್ನಡದಲ್ಲಿ ಅಷ್ಟೇನೂ ಆಸಕ್ತಿ ವಹಿಸದೆ ಬರೆದಾಗಲೂ, ನೂರಕ್ಕೆ 99 ಅಂಕ ಬಂದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿತ್ತು) ಜೊತೆಗೆ, ಹಿಂದಿಯಲ್ಲೂ ನೂರಕ್ಕೆ 65 ಅಂಕ ಮಾತ್ರ ಬಂದಿತ್ತು. ಅದರಲ್ಲೂ ನಿರೀಕ್ಷೆಗಿಂತ 30+ ಅಂಕಗಳು ಕಡಿಮೆ ಬಂದಿತ್ತು. ಹೆಚ್ಚು ಕಡಿಮೆ ಎರಡೇ ವಿಷಯದಲ್ಲಿ, 60ಕ್ಕೂ ಹೆಚ್ಚು ಅಂಕಗಳು ಮಿಸ್‌ ಆಗಿದ್ದವು. ಇತರೆ ವಿಷಯಗಳಲ್ಲೂ ನಿರೀಕ್ಷೆಗಿಂತ ಸರಾಸರಿ ಐದರಿಂದ ಹತ್ತು ಅಂಕಗಳು ಕಡಿಮೆ ಬಂದಿದ್ದವು. ರೀ ವ್ಯಾಲ್ಯೂವೇಶನ್‌ ಹಾಕೋಣವೆಂದರೆ,

ಶಿಕ್ಷಕರೊಬ್ಬರು ಹೆದರಿಸಿದ್ದು ಹೀಗೆ: ಕೊಟ್ಟ ಅಂಕ ಕಡಿಮೆ ಆಯ್ತು ಅಂತ ರೀ ವ್ಯಾಲ್ಯೂವೇಶನ್‌ಗೆ ಹಾಕಿದ್ರೆ, ಅವರಿಗೆ ಇನ್ನಷ್ಟು ಸಿಟ್ಟು ಬಂದು ಫೇಲ್‌ ಮಾಡಿದ್ರೆ ಏನ್‌ ಮಾಡ್ತೀಯಾ? ಮೊದಲು ಯಾರು ನಮ್ಮ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿರುತ್ತಾರೋ, ಅವರ ಬಳಿಯೇ ಅದು ಮರು ಮೌಲ್ಯಮಾಪನಕ್ಕೆ ಹೋಗುತ್ತೆ ಅಂತ ಆ ಮೇಷ್ಟ್ರು ತಿಳಿದಿದ್ದರು. ನಮಗೂ ಹಾಗಂತ ನಂಬಿಸಿದ್ದರು. ರೀ ವ್ಯಾಲ್ಯೂವೇಶನ್‌ಗೆ ಹಾಕಿದಾಗ ಪಾಸ್‌ ಆಗಿರುವ ಸಬ್ಜೆಕ್ಟ್ ಗಳೂ ಫೇಲ್‌ ಆಗಿಬಿಟ್ರೆ ಗತಿಯೇನು ಎಂಬ ಭಯಕ್ಕೆ, ಮರು ಮೌಲ್ಯಮಾಪನಕ್ಕೂ ಹಾಕಲಿಲ್ಲ. ಆಮೇಲೆ ಹಲವು ವರ್ಷಗಳ ನಂತರ ಗೊತ್ತಾಗಿದ್ದು; ಮೌಲ್ಯಮಾಪನಕ್ಕೂ, ಮರು ಮೌಲ್ಯಮಾಪನಕ್ಕೂ ಸಂಬಂಧವೇ ಇಲ್ಲ ಅಂತಾ. ನನ್ನ ಆಗಿನ ಗ್ರಹಿಕೆಗಳು ಸರಿಯೋ? ತಪ್ಪೋ? ಆದರೆ ಒಟ್ಟಾರೆ ಈ ಘಟನೆ ನನಗೆ ಓದಿನ ಮೇಲೆ ಆಸಕ್ತಿ ಸಂಪೂರ್ಣ ಕುಗ್ಗುವಂತೆ ಮಾಡಿಬಿಟ್ಟಿತು. ನಾವು ಎಷ್ಟು ಓದಿದರೇನು? ಎಲ್ಲಾ ಮೌಲ್ಯಮಾಪಕರ ಮೂಡು, ಮನೋಭಾವದ ಮೇಲೆ ಅವಲಂಬಿತವಾಗಿದೆ ಅನ್ನೋ ನಿರ್ಧಾರಕ್ಕೆ ಬಂದುಬಿಟ್ಟೆ. ಅಲ್ಲಿಂದ ನನ್ನ ಓದು ಸಂಪೂರ್ಣ ಹಳ್ಳ ಹಿಡಿಯಿತು. ಆ ರಿಸಲ್ಟ್ ಬಂದಾಗ ತೀರಾ ಅಂದರೆ ತೀರಾ ಹತಾಶೆಗೆ

ಒಳಗಾಗಿದ್ದೆನಾದರೂ, ಇವತ್ತು ಇಲ್ಲಿಂದ ತಿರುಗಿ ನೋಡಿದರೆ, ಆಗಿದೆಲ್ಲಾ ಒಳ್ಳೆಯದೇಆಯ್ತು ಅನಿಸುತ್ತದೆ. ಚೆನ್ನಾಗಿ ಓದಿದ್ದರೆ,  ಯಾವುದೋ ಕಚೇರಿಯಲ್ಲಿ ಗುಮಾಸ್ತನೋ, ಅಧಿಕಾರಿಯೋ ಆಗಿ ನಾಲ್ಕು ಗೋಡೆಯ ನಡುವೆ ಕೆಲಸ ಮಾಡುತ್ತಿರುತ್ತಿದ್ದೆನೇನೋ. ಹೀಗೆ ಸಿನಿಮಾರಂಗ ಪ್ರವೇಶಿಸಿ, ಹಾಡು ಬರೆದು ಇಷ್ಟೊಂದು ಜನರ ಪ್ರೀತಿ, ಅಭಿಮಾನ ಸಂಪಾದಿಸಲಾಗುತ್ತಿರಲಿಲ್ಲ ಅಂತ ಅನಿಸುತ್ತದೆ. ಇಂದು ನನ್ನಂತೆ ನಿರಾಸೆಗೊಳಗಾದ ಮಕ್ಕಳಿಗೆಲ್ಲ ಹೇಳಬಯಸೋದೇನೆಂದರೆ, ಕಡಿಮೆ ಅಂಕ ಬಂತು ಅಂತ ತಲೆ ಕೆಡಿಸ್ಕೋಬೇಡಿ. ಅಂಕಪಟ್ಟಿಯೊಂದೇ ನಿಮ್ಮ ಬದುಕನ್ನು ರೂಪಿಸುವುದಿಲ್ಲ. ಆಗೋದೆಲ್ಲಾ ಒಳ್ಳೇದಕ್ಕೆ… ಇದೇ ನಿಮ್ಮನ್ನು ಎಲ್ಲರೂ ಚಲಿಸುವ ಹಾದಿಗಿಂತ ಭಿನ್ನ ಹಾದಿ ಹಿಡಿಯಲು ಪ್ರೇರೇಪಿಸುತ್ತದೆ. ಭವಿಷ್ಯದಲ್ಲಿ ನೀವು ಹತ್ತರಲ್ಲಿ ಹನ್ನೊಂದಾಗದಂತೆ, ನಿಮಗಾಗಿ ಏನೋ ಒಂದು “ಸ್ಪೆಷಲ್’ ಕಾದಿದೆ. ­

Advertisement

Udayavani is now on Telegram. Click here to join our channel and stay updated with the latest news.

Next