Advertisement

ಸೂಪರ್‌ ಮಾರ್ಕೆಟ್‌ ರೀತಿ “ಹಾರ್ಟಿ ಬಜಾರ್‌’

11:41 AM Jun 28, 2017 | |

ಬೆಂಗಳೂರು: ಸೂಪರ್‌ ಮಾರ್ಕೆಟ್‌ ಮಾದರಿಯಲ್ಲಿ ಹಾಪ್‌ಕಾಮ್ಸ್‌ ವತಿಯಿಂದ ವಿನೂತನವಾದ “ಹಾರ್ಟಿ ಬಜಾರ್‌’ ಶೀಘ್ರವೇ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ತಾಜಾ ಹಣ್ಣು, ತರಕಾರಿಗಳು ಸೇರಿದಂತೆ ವಿವಿಧ ಕಂಪನಿಗಳ ಉತ್ಪನ್ನಗಳು ಕೂಡ ಲಭ್ಯವಾಗಲಿವೆ. 

Advertisement

ಗ್ರಾಹಕ ಸ್ನೇಹಿ ಹಾರ್ಟಿಬಜಾರ್‌ ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳುತ್ತಿದ್ದು, ಅಂದಾಜು 13ರಿಂದ 16 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಡಬಲ್‌ರೋಡ್‌ ಸಮೀಪದ ಕೆಂಗಲ್‌ ಹನುಮಂತಯ್ಯ ವೃತ್ತ ಸಮೀಪದ ಹಾಪ್‌ಕಾಪ್ಸ್‌ ಕೇಂದ್ರ ಕಚೇರಿ ಬಳಿಯ ಸುಮಾರು ನಾಲ್ಕು ಸಾವಿರ ಚದರ ಅಡಿಗಳ ವಿಸ್ತೀರ್ಣದಲ್ಲಿ ಇದನ್ನು ಸಜ್ಜುಗೊಳಿಸಲಾಗಿದೆ. 

ರೈತರಿಂದ ನೇರವಾಗಿ ಖರೀದಿ ಮಾಡಿದ ರಸಾಯನಿಕ ಮುಕ್ತ ವಿವಿಧ ಬಗೆಯ ಹಣ್ಣುಗಳು, ತಾಜಾ ಸೊಪ್ಪು, ತರಕಾರಿಗಳು. ಒಣ ಹಣ್ಣುಗಳು(ಡ್ರೈಫ‌ೂಟ್ಸ್‌), ಎಂಟಿಆರ್‌ ಕಂಪನಿಗಳ ಹಲವು ಉತ್ಪನ್ನಗಳು,  ಸಿರಿಧಾನ್ಯಗಳು ಈ ಹಾರ್ಟಿ ಬಜಾರ್‌ನಲ್ಲಿ ಸಿಗಲಿವೆ. ಗ್ರಾಹಕರಿಗೆ ಕಿರಿಕಿರಿಯಾಗದಂತೆ ಮುದ ನೀಡಲು ಸುಮಧುರವಾದ ಸಂಗೀತ(ಮ್ಯೂಸಿಕ್‌)ದ ಹಿಮ್ಮೇಳವು ಕೂಡ ಹಾರ್ಟಿಬಜಾರ್‌ನಲ್ಲಿ ತೇಲಿ ಬರುವಂತೆ ಅಲ್ಲಲ್ಲಿ ಸ್ಪೀಕರ್‌ಗಳನ್ನು ಅಳವಡಿಸಲಾಗುತ್ತಿದೆ. 

ಕೆಲವು ದಿನಗಳ ಹಿಂದೆ ಹಾಪ್‌ಕಾಮ್ಸ್‌ ಮತ್ತು ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಲ (ಕೆಎಂಎಫ್) ಒಪ್ಪಂದ ಮಾಡಿಕೊಂಡಿದ್ದು, ಹಾಲು, ಮೊಸರು, ಪೇಡ ಸೇರಿದಂತೆ ವಿವಿಧ ಉತ್ಪನ್ನಗಳು ಕೂಡ ಈ ಹಾರ್ಟಿ ಬಜಾರ್‌ನಲ್ಲಿ ಸಿಗಲಿವೆ. ಇಷ್ಟೇ ಅಲ್ಲಾ! ನೈಸರ್ಗಿಕ ಪಾನೀಯಗಳು, ವಾರಕ್ಕೆರಡು ದಿನ ಸಿರಿಧಾನ್ಯಗಳಿಂದ ತಯಾರಿಸಲಾದ ತಿಂಡಿ, ತಿನಿಸುಗಳು, ಉಪಹಾರದ ಕೆಫೆ ಕೂಡ ಇಲ್ಲಿ ನಿರ್ಮಾಣಗೊಳ್ಳುತ್ತಿದೆ.

ಗ್ರಾಹಕರು ಸುಲಭವಾಗಿ ಹಣ್ಣು, ತರಕಾರಿ ಸೇರಿದಂತೆ ಇತರ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಟ್ರಾಲಿ(ಕೈಬಂಡಿ)ಗಳು ಸಹಕರಿಸಲಿವೆ. ಮುಖ್ಯವಾಗಿ ಗ್ರಾಹಕರಿಗಾಗಿ ಹಣ್ಣು, ತರಕಾರಿಗಳಿಗೆ ಹಾಪ್‌ಕಾಮ್ಸ್‌ ರಿಯಾಯಿತಿಯನ್ನು ಸಹ ಘೋಷಿಸಲಾಗುವುದು ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಮಾಹಿತಿ ನೀಡಿದ್ದಾರೆ. 

Advertisement

ಆನ್‌ಲೈನ್‌ ಬಿಲ್ಲಿಂಗ್‌: ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ, ಜೇಬಿನಲ್ಲಿ ಹಣವಿಲ್ಲ, ಬ್ಯಾಂಕ್‌ಗಳಿಗೆ ಹೋಗಲಾಗುತ್ತಿಲ್ಲ ಎಂಬ ಚಿಂತೆಯೂ ಇನ್ನು ಮುಂದೆ ಹಾಪ್‌ಕಾಮ್ಸ್‌ ಗ್ರಾಹಕರನ್ನು ಬಾಧಿಸುವುದಿಲ್ಲ. ಕಾರಣ ನಗದು ರಹಿತ ವ್ಯವಹಾರ ನಡೆಸಬೇಕು ಎನ್ನುವ ಉದ್ದೇಶದಿಂದ ಹಾರ್ಟಿ ಬಜಾರ್‌ನ ಪ್ರತಿ ವಿಭಾಗದಲ್ಲೂ ಒಂದೊಂದು ಸ್ವೆ„ಪಿಂಗ್‌ ಯಂತ್ರ ಇಡಲಾಗುತ್ತಿದೆ. 

ಜತೆಗೆ ನಗರದ ಎಲ್ಲ  ಹಾಪ್‌ಕಾಮ್ಸ್‌ಗಳಿಗೆ ಆನ್‌ಲೈನ್‌ ವ್ಯವಸ್ಥೆ ಒದಗಿಸಲಾಗುತ್ತಿದ್ದು, ಆನ್‌ಲೈನ್‌ ಬಿಲ್ಲಿಂಗ್‌ ಲಭ್ಯವಾಗಲಿದೆ. ಇದರೊಂದಿಗೆ ಹಾರ್ಟಿ ಬಜಾರ್‌ನಲ್ಲಿ ಆಯಾ ದಿನಗಳಲ್ಲಿ ಸಿಗಲಿರುವ ಹಣ್ಣು, ತರಕಾರಿ, ಸಿರಿಧಾನ್ಯ, ಪಾನೀಯ ಇತ್ಯಾದಿಗಳ ಮಾರುಕಟ್ಟೆ ದರವನ್ನು ಡಿಜಿಟಲ್‌ ರೇಟ್‌ ಸೊðàಲಿಂಗ್‌ ಬೋರ್ಡ್‌ನಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತಿದೆ. 

ಸಂಡೆ ಬಜಾರ್‌: ಸಂಡೆ ಬಜಾರ್‌ ಎನ್ನುವ ವಿನೂತನ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವ ಹಾಪ್‌ಕಾಮ್ಸ್‌ ಪ್ರತಿ ಭಾನುವಾರ ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ, ಸಿರಿಧಾನ್ಯ ಇತ್ಯಾದಿಗಳ ಮಾರಾಟ ವ್ಯವಸ್ಥೆ ಮಾಡುತ್ತಿದೆ. ಸಿರಿಧಾನ್ಯಗಳನ್ನು ಹೇಗೆ ಬಳಸಬೇಕು, ಅವುಗಳಿಂದ ತಿಂಡಿ, ತಿನಿಸು ತಯಾರಿಸುವುದು ಹೇಗೆ ಎಂಬ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುವುದು. ಜತೆಗೆ ಗ್ರಾಹಕರಿಗೆ ಅಲ್ಲಿಯೇ ಸಿರಿಧಾನ್ಯಗಳ ತಿನಿಸುಗಳನ್ನು ಸವಿಯಲು ನೀಡುವುದು ವಿಶೇಷ.

ಉದ್ಘಾಟನೆ: ಬಜಾರ್‌ನಲ್ಲಿ ನಡೆಯುವ ವ್ಯವಹಾರ ಅತ್ಯಂತ ಪಾರದರ್ಶಕವಾಗಿ ಇರಬೇಕು ಎನ್ನುವ ಕಾರಣಕ್ಕೆ 2ರಿಂದ 4 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಜೂನ್‌ 27ರಂದು ಕಾಮಗಾರಿ ಪೂರ್ಣಗೊಳ್ಳಲಿದ್ದು, ವಿನೂತನವಾಗಿ ನಿರ್ಮಿಸಿರುವ ಹಾರ್ಟಿಬಜಾರ್‌ ಜೂ.29ರಂದು ಬೆಳಗ್ಗೆ ಲೋಕಾರ್ಪಣೆಗೊಳ್ಳಲಿದ್ದು, ಹಾಪ್‌ಕಾಮ್ಸ್‌ ಅಧ್ಯಕ್ಷ ಶ್ರೀನಿವಾಸ್‌ ಉದ್ಘಾಟಿಸಲಿದ್ದಾರೆ.

ಸೂಪರ್‌ ಮಾರ್ಕೆಟ್‌ ಮಾದರಿಯಲ್ಲಿ ಹಾರ್ಟಿಬಜಾರ್‌ ನಿರ್ಮಿಸುತ್ತಿದ್ದು, ಗ್ರಾಹಕ ಸ್ನೇಹಿಯಾಗಿ ಸಜ್ಜುಗೊಳಿಸಲಾಗುತ್ತಿದೆ. ಬಜಾರ್‌ ನಿರ್ಮಾಣಕ್ಕೆ ಎಸ್‌ಬಿಐ 10 ಲಕ್ಷ ರೂ. ಹಾಗೂ ಫ್ಲಿಪ್‌ಕಾರ್ಟ್‌ ಸಂಸ್ಥೆ 6 ಲಕ್ಷ ರೂ. ದೇಣಿಗೆ ನೀಡಿದೆ. ಅತ್ಯಾಧುನಿಕ ವ್ಯವಸ್ಥೆಯ ಈ ಹಾರ್ಟಿಬಜಾರ್‌ ಗ್ರಾಹಕರಿಗೆ ಇಷ್ಟವಾಗಲಿದೆ.
– ಡಾ.ಬೆಳ್ಳೂರು ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next