ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಷೇರು ಖರೀದಿಯಲ್ಲಿ ಹೆಚ್ಚು ಉತ್ಸಾಹ ತೋರಿಸದ ಪರಿಣಾಮ ಗುರುವಾರ (ಮೇ 12) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಏರ್ ಇಂಡಿಯಾದ ನೂತನ ಸಿಇಒ & ಎಂಡಿ ಯಾಗಿ ಕ್ಯಾಂಪ್‌ಬೆಲ್ ವಿಲ್ಸನ್
ಏಪ್ರಿಲ್ ತಿಂಗಳ ಹಣದುಬ್ಬರ ದರ ಹಾಗೂ ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನಾ ಅಂಕಿಅಂಶದ ಘೋಷಣೆಗೂ ಮುನ್ನ ಹೂಡಿಕೆದಾರರು ಷೇರು ವಹಿವಾಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸದಿರುವುದು ಸೆನ್ಸೆಕ್ಸ್ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,158.08 ಅಂಕಗಳಷ್ಟು ಕುಸಿತವಾಗಿದ್ದು, 52,930.31 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಷೇರುಪೇಟೆಯ ಮಧ್ಯಂತರ ವಹಿವಾಟಿನ ವೇಳೆ 1,386.09 ಅಂಕಗಳಷ್ಟು ಇಳಿಕೆಯಾಗಿದ್ದು, 52,702.30 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಎನ್ ಎಸ್ ಇ ನಿಫ್ಟಿ 359.10 ಅಂಕ ಇಳಿಕೆಯಾಗಿದ್ದು, 15,808 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಟೈಟಾನ್, ಎನ್ ಟಿಪಿಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ವಿಪ್ರೋ, ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಮಾತ್ರ ಲಾಭಗಳಿಸಿದೆ. ಇನ್ನುಳಿದಂತೆ ಟೋಕಿಯೊ, ಸಿಯೋಲ್ ಮತ್ತು ಶಾಂಘೈ ಷೇರುಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.