ಮುಂಬಯಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರ ಆಕಾಶದೆತ್ತರಕ್ಕೆ ಚಿಮ್ಮಿದ್ದು, ಬರೋಬ್ಬರಿ 873 ಅಂಕಗಳಷ್ಟು ದಾಖಲೆಯ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಇದೇ ಮೊದಲ ಬಾರಿಗೆ ನಿಫ್ಟಿ ಕೂಡಾ 16,000 ಗಡಿ ದಾಟಿದೆ.
ಇದನ್ನೂ ಓದಿ:ಶಕ್ತಿ ಕೇಂದ್ರವಾದ ಬಿಎಸ್‌ವೈ ಕಾವೇರಿ ನಿವಾಸ; ಶಿಫಾರಸು ಮಾಡುವಂತೆ ಒತ್ತಡ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 872.73 ಅಂಕಗಳಷ್ಟು ದಾಖಲೆಯ ಏರಿಕೆಯೊಂದಿಗೆ 53,823.36 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 245.60 ಅಂಕಗಳ ಏರಿಕೆಯೊಂದಿಗೆ ದಾಖಲೆಯ 16,130.75ರ ಗಡಿ ದಾಟಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟೈಟಾನ್, ಎಚ್ ಡಿಎಫ್ ಸಿ, ನೆಸ್ಲೆ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ಶೇ.4ರಷ್ಟು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಆಟೋ, ಟಾಟಾ ಸ್ಟೀಲ್ ಮತ್ತು ಎನ್ ಟಿಪಿಸಿ ಷೇರುಗಳು ನಷ್ಟ ಅನುಭವಿಸಿದೆ.
2019-20ನೇ ಹಣಕಾಸು ವರ್ಷದಲ್ಲಿ ನಿವ್ವಳ ತೆರಿಗೆ ವರಮಾನ 13.56 ಲಕ್ಷ ಕೋಟಿಯಷ್ಟಿತ್ತು. 2020-21 ನೇ ಹಣಕಾಸು ವರ್ಷದಲ್ಲಿ 14.24 ಲಕ್ಷ ಕೋಟಿಗೆ ತಲುಪಿ ಶೇ.5ರಷ್ಟು ಏರಿಕೆ ಕಂಡಿದೆ. ಹಾಗೂ ಜಿಎಸ್ ಟಿ ಸಂಗ್ರಹದಲ್ಲಿಯೂ ಏರಿಕೆಯಾಗಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಷೇರು ಮಾರುಕಟ್ಟೆಯಲ್ಲಿ ಬಿರುಸಿನ ವಹಿವಾಟಿಗೆ ಸಾಕ್ಷಿಯಾಯಿತು ಎಂದು ವಿಶ್ಲೇಷಿಸಲಾಗಿದೆ.