Advertisement
ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆ ಎಂದರೆ ಸರಕು ಮತ್ತು ಸೇವಾದಾತರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ವಿನಿಮಯ ಮಾಡುವ ಸ್ಥಳ. ಈ ವ್ಯವಸ್ಥೆಯಲ್ಲಿ ಒಳಪಡುವ ಸಂಸ್ಥೆಗಳು, ವಿಧಿವಿಧಾನಗಳು, ಸಾಮಾಜಿಕ ಸಂಬಂಧಗಳು, ಮೂಲಭೂತ ಸೌಕರ್ಯಗಳು ಎಲ್ಲವೂ ಮಾರುಕಟ್ಟೆಯ ಅಂಶಗಳೇ ಆಗಿವೆ. ಭೌತಿಕ ಮಾರುಕಟ್ಟೆಯಲ್ಲಿ ಪರಸ್ಪರ ವಿನಿಮಯದ ಸಂದರ್ಭದಲ್ಲಿ ನಗದು ಕೈ ಬದಲಾಗುತ್ತದೆ. ತೀರಾ ಹಿಂದುಳಿದ ಮಾರುಕಟ್ಟೆಗಳಲ್ಲಿ ವಸ್ತುಗಳ ವಿನಿಮಯದ ಮೂಲಕವೂ ವ್ಯವಹಾರಗಳು ನಡೆಯುತ್ತವೆ. ಇದು ಮಾರುಕಟ್ಟೆಯ ಸ್ಥೂಲ ರೂಪ.
Related Articles
Advertisement
ಮಾರುಕಟ್ಟೆ – ಒಂದು ಸಮರ್ಥ ವ್ಯವಸ್ಥೆ: ಸ್ವತ್ಛಂದ ಮಾರುಕಟ್ಟೆ (frಛಿಛಿ ಞಚrkಛಿಠಿ) ಸಂಪನ್ಮೂಲಗಳ ವಿತರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಂಡವಾಳಶಾಹೀ ದೇಶಗಳಲ್ಲಿ ಇಂತಹ ಮಾರುಕಟ್ಟೆಗಳೇ ಕಾರ್ಯವೆಸಗುತ್ತವೆ. ಇಂತಹ ಮಾರುಕಟ್ಟೆಗಳು ಬಂಡವಾಳದ ಕೈಗೊಂಬೆಗಳೆಂಬ ಅಪಖ್ಯಾತಿ ಇದ್ದರೂ ಇದು ವಿವಾದಿತ ವಿಚಾರ. ಮಾರುಕಟ್ಟೆಯ ಪರಸ್ಪರ ಶಕ್ತಿಗಳೇ ಸರಕು ಅಥವಾ ಸೇವೆಗಳ ಮೌಲ್ಯವನ್ನು ನಿರ್ಧರಿಸುವುದರಿಂದ ಬಂಡವಾಳ ಈ ಶಕ್ತಿಗಳ ಅಧೀನವಾಗುವುದು ವಾಸ್ತವ-ಆದ್ದರಿಂದ ಬಂಡವಾಳ ತನ್ನ ಮೇಲುಕೈ ಸಾಧಿಸಲು ಅಸಾಧ್ಯ ಎನ್ನುವುದೇ ಈ ಚರ್ಚಿತ ವಿಚಾರ. ಇಂತಹ ಮುಕ್ತ ಮಾರುಕಟ್ಟೆಗಳಲ್ಲಿ ಉತ್ಪಾದಕರು ಮತ್ತು ಗ್ರಾಹಕರ ನಡುವೆ ತೀವ್ರಪೈಪೋಟಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಗ್ರಾಹಕರನ್ನು ನಿಗ್ರಹಿಸಿ ಸರಕುಗಳ ಬೆಲೆಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಯಾರ ಆಧಿಪತ್ಯವೂ ಮಾರುಕಟ್ಟೆಯಲ್ಲಿ ಸಾಧ್ಯವಿಲ್ಲ. ಸದಾ ಗುಣಮಟ್ಟ, ಕನಿಷ್ಠ ಬೆಲೆ ಸಾಧಿಸುವುದು ಅನಿವಾರ್ಯ. ಯಾವ ಉತ್ಪಾದಕನನ್ನು ಬಳಸಿ ಕೊಳ್ಳಬೇಕೆಂಬುದನ್ನು ಗ್ರಾಹಕನೇ ನಿರ್ಧರಿಸುವುದು ಇಂತಹ ಮಾರುಕಟ್ಟೆಗಳ ಮುಖ್ಯ ಲಕ್ಷಣ! ಬಂಡವಾಳದ ಕ್ರೊಢೀಕರಣ, ವಿನಿಮಯದ ವಿಚಾರದಲ್ಲೂ ಗ್ರಾಹಕನದೇ ಮೇಲುಗೈ. ಇಲ್ಲಿ ಗ್ರಾಹಕರೆಂದರೆ ಹೂಡಿಕೆದಾರರು ಎನ್ನಬಹುದು. ಕ್ಷಮತೆಯಿಂದ ಕಾರ್ಯವೆಸಗುವ ಉದ್ಯಮಗಳಲ್ಲಿ ಮಾತ್ರ ಹೂಡಿಕೆದಾರರು ತಮ್ಮ ಉಳಿತಾಯದ ಹಣವನ್ನು ತೊಡಗಿಸುತ್ತಾರೆ. ಇದರಿಂದ ಬಂಡವಾಳದ ಸಮರ್ಪಕ ಉಪಯೋಗ/ಬಟವಾಡೆ ನಡೆಯುತ್ತದೆ. ಮುಕ್ತ ಮಾರುಕಟ್ಟೆಗಳಲ್ಲಿ ಬಂಡವಾಳ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಹರಿದಾಡುವುದರಿಂದ ಜಾಗತಿಕ ನೆಲೆಯಲ್ಲಿ ಬಂಡವಾಳದ ಸಮರ್ಥಕ ಬಳಕೆಯೂ ಸಾಧ್ಯವಾಗಿರುವುದು ಮಾರುಕಟ್ಟೆಯ ಒಂದು ಸಾಧನೆಯೆನ್ನಬಹುದು.
ಮಾರುಕಟ್ಟೆಗಳ ಆರೋಗ್ಯ: ಮಾರುಕಟ್ಟೆಗಳು ಸಂಪನ್ಮೂಲಗಳ ವಿಲೆವಾರಿಯಲ್ಲಿ ಮುಖ್ಯ ಪಾತ್ರ ವಹಿಸುವುದೇನೋ ಸರಿಯೇ. ಆದರೆ ಅವುಗಳು ತಮ್ಮ ವಿಶ್ವಾರ್ಸಾಹತೆಯನ್ನು ಉಳಿಸಿಕೊಂಡು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುವುದು ಅತೀ ಅಗತ್ಯ. ಜಾಗತೀಕರಣದಿಂದಾಗಿ ಮಾರುಕಟ್ಟೆಗಳು ಹಾಸುಹೊಕ್ಕಾಗುತ್ತಿವೆ. ಮಾರುಕಟ್ಟೆಗಳಲ್ಲಿ ಸ್ಪರ್ಧೆಯೇ ಮುಖ್ಯವಾಗುವಾಗ, ಮಾರುಕಟ್ಟೆಯ ಆಧೀನ ಸಂಸ್ಥೆಗಳು, ಘಟಕಗಳು ತಮ್ಮ ಉಳಿವಿಗಾಗಿ ಸದಾ ಪೈಪೋಟಿಯಲ್ಲಿ ತೊಡಗುತ್ತವೆ. ತಮ್ಮ ಪಾರಮ್ಯವನ್ನು ಉಳಿಸಿಕೊಳ್ಳಲು ಕೆಲವೊಮ್ಮೆ ಅಡ್ಡ ದಾರಿ ಹಿಡಿಯುವುದು, ಹಿಚ್ಚಿನ ರಿಸ್ಕ್ ತೆಗೆದುಕೊಳ್ಳುವುದು, ದೂರದೃಷ್ಟಿಯಿಂದ ಸದ್ಯ ಭವಿಷ್ಯದ ನಿರ್ವಹಣೆಗೆ ತೊಡಗುವುದು, ಕರವಂಚನೆ, ಗತಿ ನಿಯಂತ್ರಕ (rಛಿಜulಚಠಿಟ್ಟ) ವಿಧಿ ವಿಧಾನಗಳ ಉಲ್ಲಂಘನೆ, ನಿರ್ಲಕ್ಷ್ಯ ಮಾಡುವುದು ಸಾಮಾನ್ಯ ಆಮಿಷಗಳು. ಮಾರುಕಟ್ಟೆಗಳು ಸ್ಥಿಮಿತದಲ್ಲಿರಬೇಕಾದರೆ ಸನ್ನಡತೆ, ಜಾಗರೂಕತೆ, ಸತ್ಯಸಂಧತೆ, ವಿಶ್ವಾಸಾರ್ಹತೆಗಳನ್ನು ಉಳಿಸಿಕೊಳ್ಳುವುದು ಅತೀ ಅಗತ್ಯ. ಮಾರುಕಟ್ಟೆಗಳು ಅದರ ಭಾಗವಾದ ಘಟಕಗಳ ಒಳಸಂಚಿಗೆ ಬಲಿಯಾಗುತ್ತವೆ. 2008ರ ಜಾಗತಿಕ ಧ್ರುವೀಕರಣ ಇದಕ್ಕೊಂದು ಜ್ವಲಂತ ಉದಾಹರಣೆ. ಮಾರುಕಟ್ಟೆಗಳು ಎಷ್ಟೇ ಮುಕ್ತವಾಗಿದ್ದರೂ ದೇಶೀಯ ಮತ್ತು ಅಂತಾರಾಷ್ಟ್ರೀಯ ನೆಲೆಯಲ್ಲಿ ಗತಿ ನಿಯಂತ್ರಕರು ಸೂಕ್ತ ವಿಧಿವಿಧಾನಗಳನ್ನು ರೂಪಿಸಿ ಮಾರುಕಟ್ಟೆಗಳನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳುವುದು ಅತೀ ಅಗತ್ಯ. ಮಾರುಕಟ್ಟೆಗಳು ಹೊಸ-ಹೊಸ ರೂಪಗಳನ್ನು ಆವಿಷ್ಕರಿಸುತ್ತಿರುವುದರಿಂದ ಮಾರುಕಟ್ಟೆಯ ಕಾನೂನುಗಳು, ವಿಧಾನಗಳು ಗ್ರಾಹಕರ ಹಿತರಕ್ಷಣೆಯ ದೃಷ್ಟಿಯಿಂದ ಸಮರ್ಥವಾಗಿರಬೇಕು. ತಾತ್ವಿಕ ಮಾರುಕಟ್ಟೆಗಳು ವೇಗವಾಗಿ ಬೆಳೆಯುತ್ತಿರುವುದರಿಂದ ಆ ದಿಶೆಯಲ್ಲಿ ನಿಯಂತ್ರಕರ ಗಮನಹರಿಯಬೇಕಾಗಿದೆ.
ನಮ್ಮ ಮಾರುಕಟ್ಟೆಗಳು ಮತ್ತು ನಾವು: ಕಳೆದ ಅರ್ಧ ಶತಮಾನದಲ್ಲಿ ಮಾರುಕಟ್ಟೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಿರುವುದನ್ನು ನಾವು ಕಾಣಬಹುದು. ಹಳ್ಳಿಗಳಲ್ಲೂ ಅರೆ ನಗರಗಳಲ್ಲೂ ವಾರಕ್ಕೊಮ್ಮೆ ನಡೆಯುವ ಸಂತೆಗಳಿಂದ ನಾವೀಗ “ಮಾಲ್’ಗಳೆಂಬ ಹೊಸ ತರಹದ ಮಾರುಕಟ್ಟೆಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವನಕ್ರಮ ಅದಕ್ಕೆ ಒಗ್ಗಿಕೊಂಡಿದೆ. ನಮ್ಮ ಜೀವನಶೈಲಿಯು ಮೂಲ ಆವಶ್ಯಕತೆಗಳನ್ನು ಮೀರಿ ದೂರ ಸಾಗಿದೆ. ಇಂದಿನ ವಾಣಿಜ್ಯ ಮತ್ತು ಉದ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಟ್ಟು ಹಾಕಿವೆ. ಭಾರತದ ಮಟ್ಟಿಗೆ ಮಾರುಕಟ್ಟೆಗಳು ಮೂಲ ಲಕ್ಷಣಗಳನ್ನು ಬದಲಿಸಿ ಜಾಗತಿಕ ಮಾರುಕಟ್ಟೆಯ ಲಕ್ಷಣಗಳನ್ನು ತನ್ನದಾಗಿಸಿಕೊಳ್ಳುತ್ತಿವೆ. ಕೆಲವು ದಶಕಗಳ ಹಿಂದೆ ನಿಯಂತ್ರಿತ ಆರ್ಥಿಕತೆಯಲ್ಲಿ ಉತ್ಪನ್ನಗಳ ಕೊರತೆ ಇತ್ತು. ಆದ್ದರಿಂದ ಮಾರಾಟಕ್ಕೆ ಹೆಚ್ಚಿನ ಒತ್ತು ಬೇಕಿರಲಿಲ್ಲ. ಆದರೆ ಈಗ ತಯಾರಿ-ಉತ್ಪಾದನೆಗೆ ಕಡಿವಾಣಗಳಿಲ್ಲ. ಆದ್ದರಿಂದ ಉತ್ಪನ್ನಗಳು ಬೇಡಿಕೆಯನ್ನು ಮೀರಿವೆ. ಆದ್ದರಿಂದ ಮಾರಾಟ ಆದ್ಯತೆ ಪಡೆದಿದೆ. ಇದು ವಿವಿಧ ಮಾರುಕಟ್ಟೆಗಳನ್ನು ಹುಟ್ಟು ಹಾಕಿ ಉತ್ಪಾದನೆಯನ್ನು ಪ್ರಚೋದಿಸಿದೆ. ವಸ್ತು ಬಾಹುಳ್ಯದ ಇಂದಿನ ದಿನಗಳಲ್ಲಿ ಗ್ರಾಹಕರದೇ ಮೇಲುಗೈ; ಆಯ್ಕೆಗೆ ಸಾಕಷ್ಟು ಅವಕಾಶಗಳು. ಒಂದು ಸ್ಕೂಟರ್ ಖರೀದಿಗೆ ಐದೋ ಹತ್ತೋ ವರ್ಷಗಳಷ್ಟು ಕಾಯಬೇಕಾದ ಆ ದಿನಗಳೆಲ್ಲಿ! ಅವೇ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸುತ್ತಾಡಿ ಖರೀದಿಸಬಹುದಾದ ಇಂದಿನ ದಿನಗಳೆಲ್ಲಿ! ಇದು ಉದಾರೀಕರಣದ ಒಂದು ಕೊಡುಗೆಯೇ? ಶಾಪವೇ? ಹೇಗೆ ಉತ್ತರಿಸಬೇಕು!?
ಮಾರುಕಟ್ಟೆಗಳು ಬೆಳೆದಂತೆಲ್ಲ ಜನರ ಆವಶ್ಯಕತೆಗಳೂ ಬೆಳೆಯುತ್ತಿರುವುದು ವಿಶೇಷ. ಮಾರುಕಟ್ಟೆಗಳು ಎಷ್ಟೇ ಬೆಳೆಯಲಿ, ಎಷ್ಟೇ ವಸ್ತುವೈವಿಧ್ಯಗಳು ಮಾರುಕಟ್ಟೆಯಲ್ಲಿ ಕಾಣಬರಲಿ; ಗ್ರಾಹಕನ ಬೇಡಿಕೆಗಳು ಎಂದಿಗೂ ಸಂತೃಪ್ತವಾಗುವುದಿಲ್ಲ. ಯಾವುದೇ ನಿಖರವಾದ ಕೊಳ್ಳುವ ಉದ್ದೇಶವಿಲ್ಲದೆ ಮಾರುಕಟ್ಟೆಯಲ್ಲಿ ತಿರುಗಾಡಿದರೆ ಒಂದಷ್ಟು ವಸ್ತುಗಳೂ ಉತ್ಪನ್ನಗಳೂ ಮನೆ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಸಕಾರಾತ್ಮಕವೋ ನಕಾರಾತ್ಮಕವೋ ನಮ್ಮ ವಿವೇಚನೆಗೆ ಬಿಟ್ಟದ್ದು. ಮಾರುಕಟ್ಟೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತಿರುವುದಂತೂ ಸತ್ಯ.
– ಡಾ| ಕೊಳ್ಚಪ್ಪೆ ಗೋವಿಂದ ಭಟ್