Advertisement
ಪುರಸಭೆ ಸದಸ್ಯ ಶುಭದ ರಾವ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು ಕಳೆದ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಗೊಂಡರೂ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೀರಾ ತೊಂದರೆಯಾಗಿದೆ. ಚರಂಡಿ ಕಾಮಗಾರಿಯೂ ಅಪೂರ್ಣವಾಗಿದ್ದು, ಹಾಸುಗಲ್ಲುಗಳನ್ನು ಮುಚ್ಚದೇ ಕಳಪೆ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಬಸ್ ಓಡಾಟ, ಶನಿವಾರದ ಸಂತೆಗೂ ಸಾಕಷ್ಟು ಸಮಸ್ಯೆಯಾಗಿದೆ. ಈ ಕುರಿತು ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಅವರನ್ನು ಆಗ್ರಹಿಸಿದರು.
ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಹತ್ತು ದಿನಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ಮುಖ್ಯಾಧಿಕಾರಿಯವರಲ್ಲಿ ಒತ್ತಾಯಿಸಿದ ಶುಭದ ರಾವ್ ಇಲ್ಲಿನ ಸಮಸ್ಯೆ ಕುರಿತು ತಾವು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಯವರಿಗೆ ಪುರಸಭಾ ಮುಖ್ಯಾಧಿಕಾರಿ ಮೂಲಕ ಪ್ರತಿಭಟನ ನಿರತರು ಮನವಿ ಸಲ್ಲಿಸಿದರು. ಮಾರ್ಕೆಟ್ ರಸ್ತೆಯಿಂದ ಬಸ್ ನಿಲ್ದಾಣ ಮೂಲಕ ಪುರಸಭೆ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಪುರಸಭೆ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ, ಶ್ರೀಧರ್ ನಾಯಕ್, ದಾಮೋದರ್, ಪದ್ಮಪ್ರಸಾದ್ ಜೈನ್, ರಘುವೀರ್ ಭಾಗವಹಿಸಿದ್ದರು.