ಮುಂಬಯಿ : ನಿರಂತರ 9 ದಿನಗಳ ನಷ್ಟದ ವಹಿವಾಟಿಗೆ ಕೊನೆಗೂ ಮಂಗಳ ಹಾಡುವಲ್ಲಿ ಸಫಲವಾದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 227.71 ಅಂಕಗಳ ಏರಿಕೆಯೊಂದಿಗೆ 37,318.53 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 73.85 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,222.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ 9 ದಿನಗಳ ನಿರಂತರ ನಷ್ಟದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,940.73 ಅಂಕಗಳನ್ನು ಕಳೆದುಕೊಂಡಿತ್ತು; ನಿಫ್ಟಿ ಸುಮಾರು 600 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಡಾಲರ್ ಎದುರು ರೂಪಾಯಿ ಇಂದು 13 ಪೈಸೆಗಳ ಏರಿಕೆಯನ್ನು ದಾಖಲಿಸಿ 70.38 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಆಮದು ಸುಂಕ ಏರಿಸಿರುವ ಅಮೆರಿಕದ ಕ್ರಮಕ್ಕೆ ತಾನು ಕೂಡ ಪ್ರತೀಕಾರದ ಕ್ರಮ ತೆಗೆದುಕೊಳ್ಳುವುದಾಗಿ ಚೀನ ಹೇಳಿದ ಹಿನ್ನೆಲೆಯಲ್ಲಿ ಏಶ್ಯನ್ ಶೇರು ಪೇಟೆಗಳಲ್ಲಿಂದು ಒತ್ತಡದ ಶೇರು ಮಾರಾಟ ಕಂಡು ಬಂದಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,641 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,220 ಶೇರುಗಳು ಮುನ್ನಡೆ ಸಾಧಿಸಿದವು; 1,287 ಶೇರುಗಳು ಹಿನ್ನಡೆಗೆ ಗುರಿಯಾದವು; 134 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.