Advertisement

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

12:15 AM May 25, 2024 | Team Udayavani |

ಮಂಗಳೂರು: ಸಮುದ್ರ ಮಟ್ಟದಿಂದ 200ರಿಂದ 1000 ಮೀ. ಕೆಳ ಭಾಗದ ಮೆಸೊಪೆಲಾಜಿಕ್‌ ವಲಯದಲ್ಲಿರುವ ಆಹಾರವಾಗಿ ಬಳಕೆಯಾಗದ ಮೀನುಗಳನ್ನು ಔಷಧೀಯ ಅಥವಾ ಸೌಂದರ್ಯ ವರ್ಧಕಗಳಲ್ಲಿ ಬಳಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಯೂರೋಪ್‌, ಅಮೆರಿಕ, ಜಪಾನ್‌ನಂತಹ ದೇಶಗಳಲ್ಲಿ ಈ ಮೀನುಗಳಿಂದಲೇ ಔಷಧಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಆಹಾರವಾಗಿ ಬಳಕೆಯಾಗದ ಮೀನುಗಳ ಜೀವಕಣಗಳ ಇನ್ನಷ್ಟು ಸಂಶೋಧನೆಯ ಮೂಲಕ ಭಾರತದಲ್ಲಿ ಈ ಮೀನುಗಳ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಬಹುದಾಗಿದೆ ಎಂದು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಮತ್ತು ಐಸಿಎಆರ್‌ನ ಮಾಜಿ ಉಪನಿರ್ದೇಶಕಿ ಡಾ|ಬಿ. ಮೀನ ಕುಮಾರಿ ಹೇಳಿದರು.

Advertisement

“ಭಾರತದ ಕಡಲಾಳದ ಮೆಸೊಪೆಲಾಜಿಕ್‌ ಮೀನುಗಳ ಸುಸ್ಥಿರ ಕೊಯ್ಲು ಮತ್ತು ಬಳಕೆಯ ಸಾಧ್ಯತೆಗಳ ಅನ್ವೇಷಣೆ’ ಕುರಿತು ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಮುದ್ರ ವ್ಯಾಪ್ತಿಯಲ್ಲಿ 172 ಮಿಲಿಯನ್‌ ಟನ್‌ ಆಹಾರವಾಗಿ ಉಪಯೋಗಿಸಲಾಗದ ಮೀನುಗಳಿವೆ. ಮೇಣ ಅಥವಾ ಜೆಲ್ಲಿ ರೂಪದಲ್ಲಿರುವ ಈ ಮೀನುಗಳನ್ನು ಆಹಾರವಾಗಿ ಬಳಸುವುದಿಲ್ಲ. ಮೀನುಗಾರರ ಬಲೆಗೆ ಬೀಳುವ ಈ ರೀತಿಯ ಸಣ್ಣ ಮೀನುಗಳನ್ನು ಎಸೆಯಲಾಗುತ್ತದೆ. ಆದರೆ, ಪ್ರಸಕ್ತ ಫಿಶ್‌ ಮೀಲ್‌ಗ‌ಳಲ್ಲಿ ಇದನ್ನು ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ. ಈ ಮೀನುಗಳ ಸಂಗ್ರಹಕ್ಕೆ ಸೂಕ್ತ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ಸಮಗ್ರ ಸಂಶೋಧನೆಯಿಂದ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು.

ಐಸಿಎಆರ್‌-ಸಿಎಂಎಫ್ಆರ್‌ಐನ ನಿರ್ದೇಶಕ ಡಾ| ಎ. ಗೋಪಾಲಕೃಷ್ಣನ್‌ ಅವರು ಮಾತನಾಡಿ, ವಿಶ್ವದಾದ್ಯಂತ ಸಮುದ್ರದಾಳದಲ್ಲಿ ಆಹಾರವಾಗಿ ಬಳಕೆಯಾಗದ ಮತ್ಸé ಸಂಪತ್ತು ಸುಮಾರು 12,000 ಮಿಲಿಯನ್‌ ಮೆಟ್ರಿಕ್‌ ಟನ್‌ ಇರುವುದಾಗಿ ಅಂದಾಜಿಸಲಾಗಿದೆ. ಭಾರತೀಯ ಸಮುದ್ರದಲ್ಲಿಯೂ 160 ತಳಿಗಳೊಂದಿಗೆ 365 ಮಿಲಿಯನ್‌ ಮೆಟ್ರಿಕ್‌ ಟನ್‌ ಇಂತಹ ಮೀನು ಇರುವುದಾಗಿ ಅಂದಾಜಿಸಲಾಗಿದೆ ಎಂದರು.

ಐಸಿಎಆರ್‌ನ ಸಹಾಯಕ ಮಹಾ ನಿರ್ದೇಶಕ ಡಾ| ಸುಭದೀಪ್‌ ಘೋಷ್‌, ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್‌ ಕಲ್ಲಾರ್‌, ಡಾ| ಶೋಭಾ ಜೆ., ಡಾ| ಪ್ರವೀಣ್‌ ಪುತ್ರನ್‌, ಸಾಧು ಸಾಲ್ಯಾನ್‌ ಮುಂತಾದವರು ಉಪಸ್ಥಿತರಿದ್ದರು.ಡಾ| ಸುಜಾತಾ ಥಾಮಸ್‌ ಸ್ವಾಗತಿಸಿದರು. ಡಾ| ರಾಜೇಶ್‌ ವಂದಿಸಿದರು.

Advertisement

ಕರಾವಳಿಯಲ್ಲಿ ಅನ್ವೇಷಣೆಯ “ಪೈಲೆಟ್‌’ ಯೋಜನೆ
ಕರಾವಳಿಯ ಸಮುದ್ರವು ಈಗಾಗಲೇ ಅತಿಯಾದ ಮೀನುಗಾರಿಕೆಗೆ ಒಳಗಾಗಿದೆ ಎಂಬ ಅಪವಾದ ಇರುವ ಸಮಯದಲ್ಲಿ ಸುಮಾರು 200 ಮೀಟರ್‌ ತಳಭಾಗದಲ್ಲಿರುವ ಆಹಾರವಾಗಿ ಉಪಯೋಗಿಸಲಾಗದ ಮೀನುಗಳ ಉಪ ಉತ್ಪನ್ನಗಳತ್ತ ಗಮನ ಹರಿಸಬೇಕಾಗಿದೆ. ಈ ವೇಳೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಆಗಬಹುದಾದ ಪರಿಣಾಮಗಳನ್ನು ಅನ್ವೇಷಿಸಿಕೊಂಡು ಈ ಮೀನುಗಳ ಬಳಕೆಯ ಕುರಿತಂತೆ ಸಿಎಂಎಫ್ಐಆರ್‌ ಮೂಲಕ ಪೈಲಟ್‌ ಯೋಜನೆ ಸದ್ಯ ಜಾರಿಯಲ್ಲಿದೆ ಎಂದು ಡಾ|ಎ.ಗೋಪಾಲಕೃಷ್ಣನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next