ವಾಷಿಂಗ್ಟನ್: ಫೇಸ್‌ಬುಕ್ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ಮುಚ್ಚಿಹಾಕಲು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನೇಮಿಸಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಇಒ ಹಾಗೂ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ರಾಜೀ ನಾಮೆ ನೀಡಬೇಕು ಎಂದು ಫೇಸ್‌ಬುಕ್ ಹೂಡಿಕೆದಾರರು ಆಗ್ರಹಿಸಿದ್ದಾರೆ. ಫೇಸ್‌ಬುಕ್ ವಿರುದ್ಧ ಕೇಳಿಬರುತ್ತಿರುವ ಆರೋಪವನ್ನು ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೋರೋಸ್ ಹುಟ್ಟು ಹಾಕಿದ್ದು ಎಂದು ಬಿಂಬಿಸಿ, ಫೇಸ್‌ಬುಕ್ ವಿರುದ್ಧ ಕೇಳಿಬರುತ್ತಿರುವ ಆಕ್ರೋಶ ವನ್ನು ಪ್ರತಿಸ್ಪರ್ಧಿ ಸಂಸ್ಥೆಗಳತ್ತ ತಿರುಗಿಸಲು ಈ ಸಾರ್ವಜನಿಕ ಸಂಪರ್ಕ ಸಂಸ್ಥೆಗೆ ಸೂಚಿಸಲಾಗಿತ್ತು ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಅಮೆರಿಕದ ರಿಪಬ್ಲಿಕನ್ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡಿಫೈನರ್ಸ್ ಪಬ್ಲಿಕ್ ಅಫೇರ್ಸ್ ಎಂಬ ಪಿಆರ್ ಸಂಸ್ಥೆಯನ್ನೇ ಫೇಸ್‌ಬುಕ್ ನೇಮಕ ಮಾಡಿಕೊಂಡಿದೆ. ಹೀಗಾಗಿ ಫೇಸ್‌ಬುಕ್‌ನಿಂದ ಝುಕರ್‌ಬರ್ಗ್ ರಾಜೀನಾಮೆ ನೀಡಬೇಕು ಎಂದು ಅಮೆರಿಕದ ಸಂಸದ ಹಾಗೂ ಹೂಡಿಕೆ ದಾರ ಜೋನಾಸ್ ಕ್ರೋನ್ ಆಗ್ರಹಿಸಿದ್ದಾರೆ.