ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಬಿಜೆಪಿ ಸೋಮಶೆಟ್ಟಿಹಳ್ಳಿ ಕ್ಷೇತ್ರ ಜಿಪಂ ಸದಸ್ಯ ಜಿ.ಮರಿಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುನಿರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬನಶಂಕರಿಯಲ್ಲಿರುವ ಜಿಪಂ ಕಚೇರಿಯಲ್ಲಿ ಮಂಗಳವಾರ ಚುನಾವಣೆ ನಡೆಯಿತು.
ಬೆಳಗ್ಗೆ 8.30- 9.30ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸೋಮಶೆಟ್ಟಿಹಳ್ಳಿ ಕ್ಷೇತ್ರದ ಜಿಪಂ ಸದಸ್ಯರಾದ ಮರಿಸ್ವಾಮಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 11.30ಕ್ಕೆ ಆರಂಭ ಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ 50 ಸದಸ್ಯರ ಪೈಕಿ 39 ಮಂದಿ ಹಾಜರಿದ್ದರು. ಮರಿಸ್ವಾಮಿ ಹೊರತುಪಡಿಸಿ ಯಾರೊ ಬ್ಬರು ನಾಮಪತ್ರ ಸಲ್ಲಿಸದಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮರಿಸ್ವಾಮಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದರು. ಜಿಪಂ ಅಧ್ಯಕ್ಷರಾಗಬೇಕು ಎಂಬ ಕನಸು ಕಂಡಿದ್ದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದು ಧನ್ಯವಾದ ಅರ್ಪಿಸಿದರು. 30 ವರ್ಷಗಳಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯರ ವಲಯದಲ್ಲಿ ಗುರುತಿಸಿಕೊಂಡಿದ್ದೇನೆ.
ಎರಡು ಬಾರಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದರಿಂದ ಜಿಪಂ ಅಧ್ಯಕ್ಷಗಿರಿ ಇದೀಗ ಒಲಿದು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಬೆಂ.ದಕ್ಷಿಣ ಶಾಸಕ ಕೃಷ್ಣಪ್ಪ, ಬೆಂ.ನಗರ ಜಿಲ್ಲಾಧಿಕಾರಿ ಕೆ. ಶಿವಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಪಂ ಸಿಇಒ ಶಿವರಾಮೇಗೌಡ ಉಪಸ್ಥಿತರಿದ್ದರು.