Advertisement

22ರಿಂದ ಕೋಟೆ ಮಾರಿಕಾಂಬಾ ಜಾತ್ರೆ

03:02 PM Mar 17, 2022 | Niyatha Bhat |

ಶಿವಮೊಗ್ಗ: ರಾಜ್ಯದಲ್ಲಿಯೇ ಅತ್ಯಂತ ಹೆಸರು ಪಡೆದಿರುವ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವವು ಮಾರ್ಚ್‌ 22ರಿಂದ 26ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್‌.ಕೆ. ಮರಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಹೇಳಿದರು. ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಬಗ್ಗೆ ಅವರು ವಿವರಣೆ ನೀಡಿದರು.

Advertisement

ಮಾ.22 ರಂದು ಮಂಗಳವಾರ ಗಾಂಧಿ ಬಜಾರ್‌ ನಲ್ಲಿ ಬೆಳಿಗ್ಗೆ 6 ಗಂಟೆಗೆ ಶ್ರೀ ಅಮ್ಮನವರಿಗೆ ವಿಶೇಷ ಪೂಜೆ ಆರಂಭವಾಗುತ್ತದೆ. ಅಂದು ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ ಹೋಗಿ ವೀಳ್ಯ ಕೊಟ್ಟು ಮಂಗಳ ವಾದ್ಯದೊಂದಿಗೆ ಪೂಜಿಸಲಾಗುತ್ತದೆ. ನಂತರ ಕುಂಬಾರ ಜನಾಂಗದವರಿಂದ ಬಾಸಿಂಗದ ಜೊತೆ ಕರೆತರಲಾಗುವುದು. ಬ್ರಾಹ್ಮಣ ಸುಹಾಸಿನಿಯರು ದೇವಿಗೆ ಉಡಿ ತುಂಬಿ ಪೂಜಿಸುವರು. ನಂತರ ವಿಶ್ವಕರ್ಮ ಸಮುದಾಯದವರಿಂದ ಇಡೀ ದಿನ ಪೂಜೆಯಾಗುತ್ತದೆ. ದೇವಿಯ ದರ್ಶನಕ್ಕೆ ಅಲ್ಲಿ ಭಕ್ತರಿಗೆ ಅನುವು ಮಾಡಿಕೊಡಲಾಗುವುದು ಎಂದರು.

ರಾತ್ರಿ ಸುಮಾರು 9 ಗಂಟೆಗೆ ಉಪ್ಪಾರ ಸಮುದಾಯದವರು ದೇವಿಯನ್ನು ಕೋಟೆ ಶ್ರೀ ಮಾರಿಕಾಂಬಾ ದೇವಾಲಯದ ಗದ್ದುಗೆಗೆ ಕರೆತರಲಿದ್ದಾರೆ. ಇದರ ಮಧ್ಯೆ ಗಂಗಾಮತಸ್ಥ ಸಮಾಜದವರು ಗಟೇವುನೊಂದಿಗೆ ಗಾಂಧಿ  ಬಜಾರ್‌ ನಲ್ಲಿ ದೇವರಿಗೆ ಎದುರುಗೊಂಡು ಪೂಜೆ ಸಲ್ಲಿಸಲಿದ್ದು ಇದು ಸಂಪ್ರದಾಯವಾಗಿದೆ ಎಂದರು. ಗದ್ದುಗೆ ಬಳಿ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಬಾಂಧವರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆ ಕುರುಬ ಸಮಾಜದ ಚೌಡಿಕೆ ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸುವರು.

ಬುಧವಾರ ಬೆಳಿಗ್ಗೆ 6.30ರಿಂದ ಇಡೀ ದಿನ ವಾಲ್ಮೀಕಿ, ಉಪ್ಪಾರರು, ಮಡಿವಾಳರು ಸೇರಿದಂತೆ ನಾಲ್ಕು ದಿನಗಳ ಕಾಲ ಅಮ್ಮನವರಿಗೆ ಸರತಿಯಂತೆ ಪೂಜೆ ಸಲ್ಲಿಸಲಿದ್ದಾರೆ ಎಂದರು. ದೇವರ ದರ್ಶನಕ್ಕೆ ಬರುವವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಭಾರೀ ಜನ ಪಾಲ್ಗೊಳ್ಳುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಾತ್ರೆಯ ಯಶಸ್ವಿಗಾಗಿ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಜಾತ್ರೆಯ ಯಶಸ್ವಿಗಾಗಿ ಸಹಕಾರ ನೀಡಲಿವೆ ಎಂದರು. ಒಟ್ಟಾರೆ ಈ ಬಾರಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಲಕ್ಷಾಂತರ ಜನ ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮಾ.24 ಮತ್ತು 25ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.22ರಿಂದ 26 ರವರೆಗೆ ಪ್ರತಿದಿನ ಬೆಳಿಗ್ಗೆ 7ರಿಂದ ಹರಕೆ, ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.11ರಂದು ದೇವಾಲಯದ ಆವರಣದಲ್ಲಿ ಚಪ್ಪರಪೂಜೆ ನೆರವೇರಿಸಲಾಗಿದೆ. ಈ ಬಾರಿ ಜಾತ್ರೆಗಾಗಿ ಯಾರಿಂದಲೂ ಚಂದಾ ವಸೂಲಿಮಾಡುತ್ತಿಲ್ಲ. ದಾನಿಗಳೇ ದಿನಸಿ ಸಾಮಾನು, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ನೀಡುತ್ತಿದ್ದಾರೆ. ಪಾಲಿಕೆ ವತಿಯಿಂದ 10 ಲಕ್ಷ ರೂ. ನೀಡಲಾಗಿದೆ ಮತ್ತು ಇತರೆ ಸಂಘಸಂಸ್ಥೆಗಳು ಸಹ ಧನ ಸಹಾಯ ಮಾಡುತ್ತಿವೆ ಎಂದರು.

Advertisement

ಪ್ರತಿ ಬಾರಿ ಫೆಬ್ರವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಈ ಬಾರಿ ಕೊರೊನಾ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತದ ಆದೇಶದ ಮೇರೆಗೆ ಜಾತ್ರೆಯನ್ನು ಮುಂದೂಡಿ ಮಾ.22 ರಿಂದ ನಡೆಸಲು ತೀರ್ಮಾನಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್‌ 26 ರಂದು ರಾಜಬೀ  ಉತ್ಸವ ರಾತ್ರಿ 8 ಗಂಟೆಗೆ ನಡೆಯಲಿದೆ. ಗಾಂಧಿ  ಬಜಾರ್‌,ಬಿ.ಎಚ್‌. ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ ‌ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೋಟೆ ಮಾರಿಕಾಂಬಾ ಸೇವಾ ಸಮಿತಿ ಉಪಾಧ್ಯಕ್ಷ ಉಮಾಪತಿ ಪ್ರಮುಖರಾದ ಶಂಕರ್‌ ಗನ್ನಿ, ಎಂ.ಕೆ. ಸುರೇಶ್‌ಕುಮಾರ್‌, ಎಸ್‌.ಸಿ. ಲೋಕೇಶ್‌, ಎಸ್‌.ಹನುಮಂತಪ್ಪ, ಟಿ.ಎಸ್‌. ಚಂದ್ರಶೇಖರ್‌, ಎಸ್‌ .ಜಿ. ಪ್ರಭಾಕರ ಗೌಡ, ಎನ್‌.ಶ್ರೀಧರಮೂರ್ತಿ ನವುಲೆ, ಸುನೀಲ್‌, ಪ್ರಕಾಶ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next