ತನ್ನ ಟೈಟಲ್ ಮತ್ತು ಫಸ್ಟ್‌ಲುಕ್ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಟ್ರೇಲರ್ ಮತ್ತು ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಸಾಮಾನ್ಯವಾಗಿ ಬಹುತೇಕ ಸಿನಿಮಾದ ಕಥೆಗಳು ನಾಯಕನ ಸುತ್ತ ಹೆಣೆದಿರಲಾಗಿರುತ್ತದೆ. ನಾಯಕ ಅಥವಾ ನಾಯಕಿಯ ಪಾತ್ರದ ಮೂಲಕವೇ ಸಿನಿಮಾದ ಕಥೆ ಕೂಡಾ ಸಾಗುತ್ತದೆ. ಆದರೆ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಕಥೆ ಸಂಪೂರ್ಣ ಖಳನಾಯಕನ ಮೇಲೆ ಸಾಗುತ್ತದೆ ಎಂಬುದು ವಿಶೇಷ.
ಈ ಹಿಂದೆ ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ “ಸಲಗ’ ಸಿನಿಮಾದಲ್ಲಿ ಸೂರಿಯಣ್ಣ ಪಾತ್ರದ ಮೂಲಕ ಗಮನ ಸೆಳೆದಿದ್ದ, ದಿನೇಶ್ ಕುಮಾರ್. ಡಿ “ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರದಲ್ಲಿ ಹುಲಿಯಾ ಎಂಬ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೊತೆಗೆ “ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಈ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದಾರೆ.
ರಾಜೀವ್ ಚಂದ್ರಕಾಂತ್ “ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ನಿರ್ದೇಶನ ಮಾಡಿದ್ದಾರೆ. “1990ರ ಕಾಲಘಟ್ಟದಲ್ಲಿ ರಾಮಾಪುರದ ಮಜ್ಜೆನಹಳ್ಳಿ ಎನ್ನುವ ಸಣ್ಣ ಪಟ್ಟಣದಲ್ಲಿ, ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಕಾಲ್ಪನಿಕ ಕಥೆಯ ಸುತ್ತ ಸಿನಿಮಾ ಸಾಗುತ್ತದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ’ ಎಂಬುದು ಚಿತ್ರತಂಡದ ಮಾತು.
“ಮಾರಿಗುಡ್ಡದ ಗಡ್ಡಧಾರಿಗಳು’ ಸಿನಿಮಾದ ಹಾಡುಗಳಿಗೆ ಕೆ. ಎಂ. ಇಂದ್ರ ಸಂಗೀತ ಸಂಯೋಜಿಸುತ್ತಿದ್ದು, ಬಿ. ಜಯಶ್ರೀ ಮೊದಲಾದವರು ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ, ಪಳನಿ-ಜಾಗ್ವಾರ್ ಸಣ್ಣಪ್ಪ ಸಾಹಸ ಸಂಯೋಜನೆಯಿದೆ.