Advertisement

ಯುಎಸ್‌ ಓಪನ್‌ : ಶರಪೋವಾ, ಮುಗುರುಜಾ ಪರಾಭವ 

07:30 AM Sep 05, 2017 | Team Udayavani |

ನ್ಯೂಯಾರ್ಕ್‌: ಮರಿಯಾ ಶರಪೋವಾ ಅವರ ಯುಎಸ್‌ ಓಪನ್‌ ಗೆಲುವಿನ ಓಟ ಪ್ರೀ-ಕ್ವಾರ್ಟರ್‌ ಫೈನಲಿಗೆ ಕೊನೆಗೊಂಡಿದೆ. ವಿಂಬಲ್ಡನ್‌ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ ಕೂಡ ನ್ಯೂಯಾರ್ಕ್‌ ಟೆನಿಸ್‌ ಸಮರದಲ್ಲಿ ಸೋಲನುಭವಿಸಿದ್ದಾರೆ. ಆತಿಥೇಯ ನಾಡಿನ ವೀನಸ್‌ ವಿಲಿಯಮ್ಸ್‌, ಸ್ಲೋನ್‌ ಸ್ಟೀಫ‌ನ್ಸ್‌ ಜತೆಗೆ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ ಮತ್ತು ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಕ್ವಾರ್ಟರ್‌ ಫೈನಲಿಗೆ ಮುನ್ನಡೆದಿದ್ದಾರೆ.

Advertisement

ರಶ್ಯನ್‌ ತಾರೆ ಮರಿಯಾ ಶರಪೋವಾ ಅವರಿಗೆ ಆಘಾತವಿಕ್ಕಿದವರು ಲಾತ್ವಿಯಾದ 16ನೇ ಶ್ರೇಯಾಂಕಿತ ಆಟಗಾರ್ತಿ ಅನಾಸ್ತಾಸಿಜಾ ಸೆವತ್ಸೋವಾ. “ಆರ್ಥರ್‌ ಆ್ಯಶ್‌ ಸ್ಟೇಡಿಯಂ’ನಲ್ಲಿ ಸಾಗಿದ 3 ಸೆಟ್‌ಗಳ ಕಠಿನ ಹೋರಾಟವನ್ನು ಅವರು 5-7, 6-4, 6-2ರಿಂದ ಗೆದ್ದರು.

ಇದು ಸೆವಸ್ತೋವಾ ಕಾಣುತ್ತಿರುವ ಸತತ 2ನೇ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌. ಉಳಿದ ಯಾವುದೇ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿಲ್ಲ.

ಮೊದಲ ಸುತ್ತಿನಲ್ಲೇ ಸಿಮೋನಾ ಹಾಲೆಪ್‌ ಅವರನ್ನು ಸೋಲಿಸಿ ಗ್ರ್ಯಾನ್‌ಸ್ಲಾಮ್‌ಗೆ ಭರ್ಜರಿ “ರೀ ಎಂಟ್ರಿ’ ಕೊಟ್ಟಿದ್ದ ಶರಪೋವಾ, ಪ್ರೀ-ಕ್ವಾರ್ಟರ್‌ ಫೈನಲ್‌ ಸೋಲಿನ ಹೊರತಾಗಿಯೂ ಕಳೆದೊಂದು ವಾರದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳು ತನ್ನ ಪಾಲಿಗೆ ಒದಗಿ ಬಂದವು ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ಲೋನ್‌ ಸ್ಟೀಫ‌ನ್ಸ್‌ ಎದುರಾಳಿ
ಸೆವಸ್ತೋವಾ ಕ್ವಾರ್ಟರ್‌ ಫೈನಲ್‌ನಲ್ಲಿ ಆಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಸವಾಲನ್ನು ಎದುರಿಸಲಿದ್ದಾರೆ. ದಿನದ ಇನ್ನೊಂದು 3 ಸೆಟ್‌ ಕಾದಾಟದಲ್ಲಿ ಅವರು ಜರ್ಮನಿಯ 30ನೇ ಶ್ರೇಯಾಂಕಿತೆ ಜೂಲಿಯಾ ಜಾರ್ಜಸ್‌ ವಿರುದ್ಧ 6-3, 3-6, 6-1ರಿಂದ ಗೆದ್ದು ಬಂದರು. ಸ್ಟೀಫ‌ನ್ಸ್‌ ತವರಿನ ಕೂಟದಲ್ಲಿ ಕಾಣುತ್ತಿರುವ ಮೊದಲ ಕ್ವಾರ್ಟರ್‌ ಫೈನಲ್‌ ಇದಾಗಿದೆ.

Advertisement

ಸೆವಸ್ತೋವಾ-ಸ್ಟೀಫ‌ನ್ಸ್‌ ನಡುವಿನ ಕ್ವಾರ್ಟರ್‌ ಫೈನಲ್‌ ಸಮಬಲದ ಹೋರಾಟವಾಗಿ ದಾಖಲಾದೀತೆಂಬುದು ಟೆನಿಸ್‌ ಪಂಡಿತರ ಲೆಕ್ಕಾಚಾರ. ತವರಿನ ಆಟಗಾರ್ತಿಯಾದ್ದರಿಂದ ಸ್ಟೀಫ‌ನ್ಸ್‌ಗೆ ಗೆಲುವಿನ ಅವಕಾಶ ಹೆಚ್ಚು ಎಂದೂ ತರ್ಕಿಸಲಾಗುತ್ತಿದೆ. 2013ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ತನಕ ಸಾಗಿದ್ದು ಸ್ಟೀಫ‌ನ್ಸ್‌ ಅವರ ಈವರೆಗಿನ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್‌ ಸಾಧನೆಯಾಗಿದೆ.

ವೀನಸ್‌ ವಿಜಯದ ಓಟ
ಕೂಟದ ಅತೀ ಹಿರಿಯ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ತಮ್ಮ ಶ್ರೇಷ್ಠ ಫಾರ್ಮನ್ನು ತವರಿನ ಗ್ರ್ಯಾನ್‌ಸ್ಲಾಮ್‌ನಲ್ಲೂ ಮುಂದುವರಿಸುವ ಸೂಚನೆ ನೀಡಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ನಲ್ಲಿ ಫೈನಲ್‌ ತನಕ ಸಾಗಿಬಂದು ಪ್ರಶಸ್ತಿ ವಂಚಿತರಾಗಿದ್ದ ವೀನಸ್‌, 3 ಸೆಟ್‌ಗಳ ಮತ್ತೂಂದು ಪಂದ್ಯದಲ್ಲಿ ಸ್ಪೇನಿನ 35ನೇ ರ್‍ಯಾಂಕಿಂಗ್‌ನ ಕಾರ್ಲಾ ಸೂರೆಜ್‌ ನವಾರೊ ಅವರನ್ನು 6-3, 3-6, 6-1ರಿಂದ ಪರಾಭವಗೊಳಿಸಿದರು.

2000 ಹಾಗೂ 2001ರಲ್ಲಿ ಸತತ 2 ಸಲ ಯುಎಸ್‌ ಓಪನ್‌ ಪ್ರಸಸ್ತಿ ಜಯಿಸಿದ್ದ ವೀನಸ್‌ ವಿಲಿಯಮ್ಸ್‌ ಈಗ ತವರಿನ 3ನೇ ಕಿರೀಟ ಧರಿಸುವ ಯೋಜನೆಯಲ್ಲಿದ್ದಾರೆ. ವೀನಸ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಪೆಟ್ರಾ ಕ್ವಿಟೋವಾ.
“ಗ್ರ್ಯಾನ್ಸಾ$Éಮ್‌ ಪ್ರಶಸ್ತಿ ತನ್ನಿಂತಾನಾಗಿ ಒಲಿಯದು ಅಥವಾ ಯಾರೂ ಇದನ್ನು ನೀಡರು. ಇದನ್ನು ನಾವಾಗಿ ಪಡೆಯಬೇಕು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಸಾಗಲಿದೆ…’ ಎಂದಿದ್ದಾರೆ ವೀನಸ್‌ ವಿಲಿಯಮ್ಸ್‌.

ಮುಗುರುಜಾ ಮನೆಗೆ
ಕಳೆದ ವಿಂಬಲ್ಡನ್‌ನಲ್ಲಿ ವೀನಸ್‌ ವಿಲಿಯಮ್ಸ್‌ಗೆ ಸೋಲುಣಿಸಿ ಪ್ರಶಸ್ತಿ ಜಯಿಸಿದ್ದ ಸ್ಪೇನಿನ ಗಾರ್ಬಿನ್‌ ಮುಗುರುಜಾ ಅವರಿಗೆ 13ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಸೋಲಿನ ಪೆಟ್ಟು ಕೊಟ್ಟಿದ್ದಾರೆ. ನೇರ ಸೆಟ್‌ಗಳ ಈ ಕಾದಾಟವನ್ನು ಕ್ವಿಟೋವಾ 7-6 (3), 6-3ರಿಂದ ಜಯಿಸಿದರು. ಎಡಗೈ ನೋವಿನಿಂದ ಸುಮಾರು 8 ತಿಂಗಳ ಕಾಲ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರವಿದ್ದ ಕ್ವಿಟೋವಾ ಪಾಲಿಗೆ ಇದೊಂದು ದೊಡ್ಡ ಸಾಧನೆ.

ಆಸ್ಟ್ರೇಲಿಯನ್‌ ಓಪನ್‌ನಿಂದ ಹೊರಗುಳಿದಿದ್ದ ಪೆಟ್ರಾ ಕ್ವಿಟೋವಾ, ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ನಲ್ಲಿ 2ನೇ ಸುತ್ತಿನಲ್ಲೇ ಪರಾಭವಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next