ಹೊನ್ನಾಳಿ: ಹಳ್ಳಕ್ಕೆ ಬಿದ್ದು 175 ಕುರಿಗಳು ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಬಲಮುರಿ ಗ್ರಾಮಕ್ಕೆ ಸಮೀಪದ ಮಾರಿಹಳ್ಳದಲ್ಲಿ ಭಾನುವಾರ ಸಂಜೆ 7ರ ಸುಮಾರಿಗೆ ಸಂಭವಿಸಿದೆ. ಕುರಿಗಳನ್ನು ರಕ್ಷಿಸಲು ಮುಂದಾದ ಕುರಿಗಾಹಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟ ಕುರಿಗಳೆಲ್ಲ ರಾಣಿಬೆನ್ನೂರು ತಾಲೂಕು ದೇವರಗುಡ್ಡದ ನೀಲಪ್ಪ, ಹೂವಿನಹಡಗಲಿಯ ಮಾಲತೇಶ್, ಸವಣೂರು ತಾಲೂಕಿನ ಚೀಲಗಟ್ಟೆಯ ನಾಗಪ್ಪ ಮತ್ತು ಬಾಳಪ್ಪ ಎಂಬುವವರಿಗೆ ಸೇರಿದವು. ಘಟನೆ ವೇಳೆ ಕುರಿಗಳನ್ನು ಸಂರಕ್ಷಿಸಲು ಮುಂದಾದ ಮಾಳಪ್ಪ ದೇವರಗುಡ್ಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿಗಾಹಿಗಳು ಕಳೆದ ಒಂದು ತಿಂಗಳಿಂದ ಬಲಮುರಿ ಗ್ರಾಮದ ಜಮೀನೊಂದರಲ್ಲಿ 1,500 ಕುರಿಗಳೊಂದಿಗೆ ಬೀಡುಬಿಟ್ಟಿದ್ದರು. ಎಂದಿನಂತೆ ಭಾನುವಾರ ಹೊಲದಲ್ಲಿ ಕುರಿಗಳನ್ನು ಮೇಯಿಸಿ ನಂತರ ದೊಡ್ಡಿಗೆ ಹೊಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುರಿಗಳು ಹಳ್ಳಕ್ಕೆ ಕಾಲು ಜಾರಿ ಬಿದ್ದಿವೆ. ಒಂದರ ಹಿಂದೆ ಒಂದು ಕುರಿ ಹಳ್ಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಿಲ್ಲಾ ಕುರಿ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ| ಎಚ್. ನಾಗರಾಜ್, ತಾಲೂಕು ಪಶು ವೈದ್ಯಾಧಿಧಿಕಾರಿ ಡಾ| ವಿಶ್ವ ನಟೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ| ಕಾರ್ತಿಕ್, ಡಾ| ರಾಜಶೇಖರ್ ಮತ್ತು ಡಾ| ಪ್ರವೀಣ್ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಆಕಸ್ಮಿಕ ಸಾವು: ಉದಯವಾಣಿ ಜತೆ ಮಾತನಾಡಿದ ತಾಲೂಕು ಪಶು ವೈದ್ಯಾಧಿಧಿ ಕಾರಿ ಡಾ| ವಿಶ್ವನಟೇಶ್, ಕುರಿಗಳ ಸಾವು ಆಕಸ್ಮಿಕವಾಗಿದೆ. ಯಾವುದೇ ಔಷಧ ಸೇವಿಸಿ ಅಥವಾ ಇನ್ನಾವುದೇ ಕಾರಣಗಳಿಂದ ಕುರಿಗಳು ಸತ್ತಿಲ್ಲ ಎಂದು ಹೇಳಿದರು.
ಹೊನ್ನಾಳಿ ಠಾಣೆಯ ಸಿಪಿಐ ಜೆ. ರಮೇಶ್, ಪಿಎಸ್‌ಐ ಎನ್.ಸಿ. ಕಾಡದೇವರಮಠ, ಎಎಸ್‌ಐ ಶಂಕರಮೂರ್ತಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಪಂ ಮಾಜಿ ಸದಸ್ಯ ಪಿ. ಆನಂದಪ್ಪ, ರೈತ ಮುಖಂಡ ಮಲ್ಲಿಕಾರ್ಜುನ್, ಪಶು ವೈದ್ಯ ಸಹಾಯಕ ರವಿಕುಮಾರ್ ಮತ್ತಿತರರಿದ್ದರು.