ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಪತಿಯಿಂದ ಬೇರಾಗಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯೊಬ್ಬರು, ಪತಿ ತನ್ನ ಫೋಟೋಗಳನ್ನು ಮಾರ್ಫಿಂಗ್ (ಅಶ್ಲೀಲಗೊಳಿಸುವುದು) ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಕೆಂಗೇರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ ಈ ಆರೋಪವನ್ನು ಪತಿ ಅಲ್ಲಗಳೆದಿದ್ದಾರೆ. ಈ ನಡುವೆ ಪತಿ ಮೇಲಿನ ಕೋಪಕ್ಕೆ ಪತ್ನಿಯೇ ಈ ರೀತಿ ಸುಳ್ಳು ದೂರು ನೀಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆ ನಂತರವೇ ಸತ್ಯ ಏನೆಂದು ತಿಳಿಯಲಿದೆ ಎಂದಿದ್ದಾರೆ.
ಕೃಷ್ಣಮೂರ್ತಿ ಎಂಬುವರ ವಿರುದ್ಧ ಕೆಂಗೇರಿ ಉಪನಗರದ ಎಸ್‌ಎಂ ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿ, 27 ವರ್ಷದ ಮಹಿಳೆ ದೂರು ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಪತಿ ತನ್ನ ಮನೆಗೆ ನುಗ್ಗಿ ದರೋಡೆ ಮಾಡಿದ್ದಾನೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.
ಸಂತ್ರಸ್ತೆ ಕೆಲ ವರ್ಷಗಳ ಹಿಂದೆ ಕೃಷ್ಣಮೂರ್ತಿ ಎಂಬುವವರನ್ನು ವಿವಾಹವಾಗಿದ್ದರು. ದಂಪತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದಾರೆ. ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ. “ಇದರಿಂದ ಕೋಪಗೊಂಡಿರುವ ಕೃಷ್ಣಮೂರ್ತಿ, ನಡತೆ ಸರಿಯಿಲ್ಲ ಎಂದು ಬಿಂಬಿಸುವ ದುರುದ್ದೇಶದಿಂದ ನನ್ನ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ’ ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮಾ.26ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಕಾನ್‌ಸ್ಟೆàಬಲ್‌ಗಳಾದ ನಾಗಪತಿ ಮತ್ತು ಆನಂದ್ ಭಟ್ ಹಾಗೂ ಸಂಬಂಧಿ ಗಣಪತಿ ಹೆಗಡೆ ಜತೆ ಮನೆಗೆ ಬಂದಿದ್ದ ಕೃಷ್ಣಮೂರ್ತಿ, ನನ್ನ ಮೇಲೆ ಹಲ್ಲೆ ನಡೆಸಿ, ಬೀರುವಿನಲ್ಲಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿ 60 ಸಾವಿರ ನಗದು, ಮೊಬೈಲ್ ಮತ್ತು ಮನೆಯಲ್ಲಿದ್ದ ಕೆಲ ವಸ್ತುಗಳನ್ನು ದರೋಡೆ ಮಾಡಿದ್ದ.
ಬಳಿಕ ತನ್ನ ಮೊಬೈಲ್‌ನಲ್ಲಿದ್ದ ನನ್ನ ಫೋಟೋಗಳನ್ನು ಮಾರ್ಫಿಂಗ್ ಮಾಡಿ ತನ್ನ ಸ್ನೇಹಿತರು, ಪರಿಚಿತರಿಗೆ ಕಳುಹಿಸಿದ್ದ. ಅಲ್ಲದೆ, ಸಾಮಾಜಿಕ ಜಾಲಾತಾಣಗಳಲ್ಲೂ ಅವುಗಳನ್ನು ಹರಿಬಿಟ್ಟಿದ್ದಾನೆ,’ ಎಂದು ಮಹಿಳೆ ದೂರು ನೀಡಿದ್ದು, ಕೃಷ್ಣಮೂರ್ತಿ ಮತ್ತು ಕಾನ್‌ಸ್ಟೆàಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರಿನ ಅಂಶವೇ ಸುಳ್ಳು?: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಂತ್ರಸ್ತೆ ನೀಡಿದ ದೂರಿನ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ದಂಪತಿ ಮಧ್ಯೆ ಜಗಳ ನಡೆದಿದ್ದು, ಪತಿಯ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಪತ್ನಿ ಈ ರೀತಿ ದೂರು ನೀಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಪೋಟೋ ಮಾರ್ಫಿಂಗ್ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.