Advertisement

ಮರ್ದಾಳ: ನೀರು ಸಂಗ್ರಹವಾಗಿ ಹಳ್ಳವಾಗಿದ್ದ ರಸ್ತೆ ಬದಿ

12:35 PM Jul 07, 2018 | Team Udayavani |

ಕಡಬ: ಕಡಬ-ಸುಬ್ರಹ್ಮಣ್ಯ ರಾಜ್ಯರಸ್ತೆಯಲ್ಲಿ ಮರ್ದಾಳದಿಂದ ಕರ್ಮಾಯಿಯತ್ತ ಸಾಗುವ ರಸ್ತೆ ಕವಲೊಡೆಯುವಲ್ಲಿ ಡಾಮರು ರಸ್ತೆಯ ಪಕ್ಕ ಮಳೆನೀರು ಸಂಗ್ರಹಗೊಂಡು ಹಳ್ಳವಾಗಿ ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಎದುರಾಗಿದ್ದ ಸಮಸ್ಯೆ ಕೊನೆಗೂ ಪರಿಹಾರವಾಗಿದೆ. ಲೋಕೋಪಯೋಗಿ ಇಲಾಖೆ ಹಿಟಾಚಿ ಯಂತ್ರದ ಮೂಲಕ ಶುಕ್ರವಾರ ರಸ್ತೆ ಬದಿಯ ಹಳ್ಳವನ್ನು ಮುಚ್ಚಿ ಮಳೆ ನೀರು ಚರಂಡಿಯ ಮೂಲಕ ಹರಿಯುವಂತೆ ಮಾಡಿ ಕಳೆದೆರಡು ವರ್ಷಗಳಿಂದ ಜನರು ಎದುರಿಸುತ್ತಿದ್ದ ಸಮಸ್ಯೆಗೆ ಮಂಗಳ ಹಾಡಿದೆ.

Advertisement

ಗಮನ ಸೆಳೆದಿದ್ದ ಸುದಿನ ವರದಿ
ಮುಖ್ಯರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳು ಸದ್ರಿ ಹೊಂಡದ ಮೇಲೆ ಚಲಿಸಿದಾಗ ರಸ್ತೆಯ ಪಕ್ಕದಲ್ಲಿ ನಡೆದು ಹೋಗುವ ಜನರಿಗೆ ಕೆಸರು ನೀರಿನ ಅಭಿಷೇಕ ಇಲ್ಲಿ ದಿನನಿತ್ಯದ ಗೋಳಾಗಿತ್ತು. ಪಕ್ಕದಲ್ಲಿಯೇ ಇರುವ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೆಸರು ನೀರಿನ ಸಿಂಚನದಿಂದಾಗಿ ದಿನಂಪ್ರತಿ ತೊಂದರೆ ಎದುರಿಸುತ್ತಿದ್ದರು. ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಹೊಂಡದ ಅರಿವಾಗದೆ ಹಲವಾರು ಅಪಘಾತಗಳು ಕೂಡ ಇಲ್ಲಿ ಸಂಭವಿಸಿತ್ತು.

ಈ ಕುರಿತು ಗ್ರಾಮಸಭೆಯಲ್ಲಿ ಹಲವು ಬಾರಿ ದೂರಿಕೊಂಡರೂ ಸಮಸ್ಯೆ ಬಗೆಹರಿಸಲು ಯಾರೂ ಮುಂದೆ ಬಂದಿಲ್ಲ. ಕಳೆದೆರಡು ವರ್ಷಗಳಿಂದ ಜನರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ ಎಂದು ಎಂದು ಸ್ಥಳೀಯ ಮುಂದಾಳು ಶಿವಪ್ರಸಾದ್‌ ಕೈಕುರೆ ಅವರು ಆರೋಪಿಸಿದ್ದರು.

ಸುದಿನ ವರದಿ ಪ್ರಕಟಿಸಿತ್ತು
ಈ ಎಲ್ಲ ವಿಚಾರಗಳನ್ನು ಉಲ್ಲೇಖೀಸಿ ಉದಯವಾಣಿ ಸುದಿನ ಕೆಲ ದಿನಗಳ ಹಿಂದೆ ಸಚಿತ್ರ ವರದಿ ಪ್ರಕಟಿಸಿ ಲೋಕೋಪಯೋಗಿ ಇಲಾಖೆಯ ಗಮನಸೆಳೆದಿತ್ತು. ವರದಿಯನ್ನು ಗಮನಿಸಿದ್ದ ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್‌ ಪ್ರಮೋದ್‌ ಕುಮಾರ್‌ ಕೆ.ಕೆ. ಅವರು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಮಳೆನೀರು ಸರಾಗವಾಗಿ ಹರಿದು ಹೋಗಲು ಚರಂಡಿಯನ್ನು ದುರಸ್ತಿಗೊಳಿಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next