ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಹಾಗೂ ತೀವ್ರ ಗೊಂದಲದಲ್ಲಿರುವ 75 ರಿಂದ 80 ಕ್ಷೇತ್ರಗಳ ಆಕಾಂಕ್ಷಿಗಳು ಹಾಗೂ ಸ್ಥಳೀಯ ಮುಖಂಡರ ಸಭೆ ಮಾ. 8ಕ್ಕೆ ನಡೆಯಲಿದೆ.
ಬೆಂಗಳೂರು ಹೊರವಲಯದ ರೆಸಾರ್ಟೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುಜೇìವಾಲ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ.
ತೀವ್ರ ಕಗ್ಗಂಟಾಗಿರುವ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳನ್ನು ಸಭೆಗಳನ್ನು ಆಹ್ವಾನಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಎರಡರಿಂದ ಮೂವರು ಪ್ರಬಲ ಆಕಾಂಕ್ಷಿಗಳಿರುವುದು ಕಾಂಗ್ರೆಸ್ ನಾಯಕರಿಗೆ ಟಿಕೆಟ್ ಆಯ್ಕೆ ಕಷ್ಟವಾಗಿದೆ. ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ಪ್ರಚಾರ ನಿರತವಾಗಿರುವುದು ಸ್ಥಳೀಯವಾಗಿ ಗೊಂದಲ ಮೂಡಿಸಿದೆ. ಹೀಗಾಗಿ ಗೊಂದಲ ಇತ್ಯರ್ಥಪಡಿಸಿ ಒಗ್ಗಟ್ಟಿನ ಮಂತ್ರ ಪಠಿಸಲು ಸಭೆ ಕರೆಯಲಾಗಿದೆ.
ಈಗಾಗಲೇ 130ರಿಂದ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿರುವ ಸ್ಕ್ರೀನಿಂಗ್ ಕಮಿಟಿಯು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು 2ನೇ ಹಂತದಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಿದೆ. ಅದಕ್ಕೂ ಮುನ್ನ ಟಿಕೆಟ್ ಆಕಾಂಕ್ಷಿಗಳ ನಡುವಿನ ಗೊಂದಲ, ಮನಸ್ತಾಪವನ್ನು ಬಗೆಹರಿಸಲಾಗುವುದು.
Related Articles
ಸಿಇಸಿ ರಚನೆ ನಿರೀಕ್ಷೆ
ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣ ಸಮಿತಿ ರಚನೆಯಾಗುವ ನಿರೀಕ್ಷೆ ಇದೆ. ಬಹುತೇಕ ಈ ವಾರದಲ್ಲಿ ಈ ಸಮಿತಿ ರಚನೆಯಾದರೆ ಅನಂತರ ಸಭೆಯ ದಿನಾಂಕ ನಿಗದಿಯಾಗಲಿದೆ. ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿರುವ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಈ ಸಮಿತಿ ಚರ್ಚಿಸಿ ಅಂತಿಮವಾಗಿ ಆಯ್ಕೆ ಪಟ್ಟಿ ಪ್ರಕಟಿಸಲಿದೆ.