ರಾಯ್‌ಪುರ(ಛತ್ತೀಸ್‌ಗಢ): ”2026 ರಲ್ಲಿ ದೇಶವನ್ನು ಸಂಪೂರ್ಣವಾಗಿ ನಕ್ಸಲಿಸಂನಿಂದ ಮುಕ್ತಗೊಳಿಸುತ್ತೇವೆ” ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ (ಆ 24) ಹೇಳಿದ್ದಾರೆ.
ಅಮಿತ್ ಶಾ ಅವರು ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ, ಛತ್ತೀಸ್‌ಗಢದ ನೆರೆಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಅಂತರ್ ರಾಜ್ಯ ಸಮನ್ವಯ ಸಭೆಯಲ್ಲಿ ಭಾಗವಹಿಸಿದರು.
ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ ಮೊದಲ 10 ವರ್ಷಗಳಲ್ಲಿ ಭದ್ರತಾ ಸಿಬಂದಿ ಮತ್ತು ನಾಗರಿಕರು ಸೇರಿ ಒಟ್ಟು 6617 ಮಂದಿ ಹತ್ಯೆಗೀಡಾಗಿದ್ದರು. ಈಗ 70% ಇಳಿಕೆಯಾಗಿದೆ. ನಮ್ಮ ಹೋರಾಟ 2026 ಮಾರ್ಚ್ ವೇಳೆಗೆ ಅಂತಿಮ ಹಂತವನ್ನು ತಲುಪಲಿದೆ ಎಂದು ನಾನು ನಂಬುತ್ತೇನೆ’ ಎಂದರು.
‘ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಮತ್ತು ಛತ್ತೀಸ್‌ಗಢ ಸರಕಾರದ ಯೋಜನೆಗಳ 100% ಸಂತೃಪ್ತಿ, ಅಂತಹ ಪ್ರದೇಶಗಳಲ್ಲಿನ ಮೂಲಸೌಕರ್ಯ ಯೋಜನೆಗಳ ಪ್ರಗತಿ, ಯೋಜನೆಗಳ ಸಮಯದಲ್ಲಿ ಎದುರಾಗುವ ಸವಾಲುಗಳನ್ನು ತೆಗೆದು ಹಾಕಲು ಈ ಸಭೆಯು ನಡೆಸಲಾಗಿದೆ. ಈಗ ಅಂತಿಮ ಆಕ್ರಮಣವನ್ನು ನಡೆಸುವ ಸಮಯ ಬಂದಿದೆ. ನಿರ್ದಯ ತಂತ್ರದೊಂದಿಗೆ ಎಡಪಂಥೀಯತೆ ಮತ್ತು ನಕ್ಸಲಿಸಂ ಅನ್ನು ಎದುರಿಸುತ್ತೇವೆ’ ಎಂದು ಶಾ ಹೇಳಿದರು.
ಜನಗಣತಿ ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ
ಜನಗಣತಿ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಶಾ”ಅದು ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ. ಒಮ್ಮೆ ನಿರ್ಧರಿಸಿ, ಅದು ಹೇಗೆ ನಡೆಯುತ್ತದೆ ಮತ್ತು ಅದು ಯಾವಾಗ ನಡೆಸಲಾಗುತ್ತದೆ ಎಂಬುದನ್ನು ನಾನು ಪ್ರಕಟಿಸುತ್ತೇನೆ” ಎಂದರು.