Advertisement

ಮಾರ್ಕ್‌-3 ಇವಿಎಂ ಬಳಕೆ ರಾಜಧಾನಿ ಸಜ್ಜು

12:05 PM Apr 17, 2018 | |

ಬೆಂಗಳೂರು: ದೇಶದಲ್ಲೇ ಮೊದಲ ಬಾರಿ “ಮಾರ್ಕ್‌-3′ ತಂತ್ರಜ್ಞಾನದ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷೀನ್‌ (ಇವಿಎಂ)ಗಳನ್ನು ಬೆಂಗಳೂರಿನಲ್ಲಿ ಬಳಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. 

Advertisement

ದೇಶದಾದ್ಯಂತ ಸದ್ಯ  ಮಾರ್ಕ್‌-2 ತಂತ್ರಜ್ಞಾನದ ಇವಿಎಂ ಬಳಸಲಾಗುತ್ತಿದ್ದು, ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ (ಬಿಇಎಲ್‌) ಅಭಿವೃದ್ಧಿಪಡಿಸಿರುವ ಮಾರ್ಕ್‌-3 ತಂತ್ರಜ್ಞಾನದ ಇವಿಎಂಗಳನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಬಿಇಎಲ್‌ನಿಂದ ಆಯೋಗಕ್ಕೆ ಮಂಗಳವಾರ 5 ಸಾವಿರ ಮಾರ್ಕ್‌-3 ಇವಿಎಂಗಳು ರವಾನೆಯಾಗಲಿವೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಬಿಇಎಲ್‌ನಿಂದ ಅಭಿವೃದ್ಧಿಪಡಿಸಲಾಗಿರುವ ಮಾರ್ಕ್‌-3 ತಂತ್ರಜ್ಞಾನದ ಇವಿಎಂಗಳನ್ನು ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ. ಮಂಗಳವಾರ ಬಿಇಎಲ್‌ನಿಂದ 5 ಸಾವಿರ ಇವಿಎಂಗಳು ರವಾನೆಯಾಗಲಿದ್ದು, ಪ್ರಾಥಮಿಕ ಹಂತ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು. 

ಸದ್ಯ ಲಭ್ಯವಿರುವ ಮಾರ್ಕ್‌-2 ಇವಿಎಂನ ಕಂಟ್ರೋಲ್‌ ಯುನಿಟ್‌ಗಳಿಗೆ ತಲಾ 16 ಅಭ್ಯರ್ಥಿಗಳ ಹೆಸರಿರುವ 4 ಬ್ಯಾಲೆಟ್‌ ಯುನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದೆ. ಆದರೆ, ಎಂ3 ಕಂಟ್ರೋಲ್‌ ಯುನಿಟ್‌ಗಳಿಗೆ 14 ಬ್ಯಾಲೆಟ್‌ ಯುನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದ್ದು, 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಬಹುದಾಗಿದೆ ಎಂದರು. 

ಎಂ3 ಕಂಟ್ರೋಲ್‌ ಯುನಿಟ್‌ ಹಾಗೂ ಬ್ಯಾಲೆಟ್‌ ಯುನಿಟ್‌ಗಳು ಬಿಇಎಲ್‌ ಹೊರತುಪಡಿಸಿ ಉಳಿದ ಯಾವುದೇ ಕಂಪೆನಿಯ ಹಾರ್ಡ್‌ವೇರ್‌ಗಳನ್ನು ಸ್ವೀಕರಿಸುವುದಿಲ್ಲ. ಒಂದೊಮ್ಮೆ ಯಾರಾದರೂ ಹಾರ್ಡ್‌ವೇರ್‌ ಅಳವಡಿಸಿದರೆ ಕೂಡಲೇ ಡಿಜಿಟಲ್‌ ಪ್ರಮಾಣೀಕರಣದ ಮೂಲಕ ಪತ್ತೆ ಮಾಡಿ ಸೂಚನೆ ನೀಡಲಿದೆ. ಜತೆಗೆ ಅತ್ಯಂತ ನಿಖರವಾದ ಫ‌ಲಿತಾಂಶವನ್ನು ನೀಡುವ ಸಾಮರ್ಥಯ ಹೊಂದಿದ್ದು, ವಿವಿ ಪ್ಯಾಟ್‌ಗಳ ಪರದೆಯ ಬ್ರೈಟ್‌ನೆಸ್‌ಅನ್ನು ಲೋ, ಮೀಡಿಯಂ ಹಾಗೂ ಹೈ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು. 

Advertisement

ಬಿಇಎಲ್‌ನಿಂದ 5 ಸಾವಿರ ಎಂ3 ಇವಿಎಂಗಳು ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ನಗರದ 3,250 ಮತಗಟ್ಟೆಗಳಲ್ಲಿ ಬಳಸಲು ಉದ್ದೇಶಿಸಲಾಗಿದ್ದು, ಉಳಿದವುಗಳನ್ನು ಕಾಯ್ದಿರಿಸಲಾಗುತ್ತದೆ. ಚುನಾವಣೆಯ ದಿನ ಯಾವುದೇ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಕೂಡಲೇ ಕಾಯ್ದಿರಿಸಿದ ಇವಿಎಂಗಳನ್ನು ಬಳಸಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

ಒಂದು ಮತಗಟ್ಟೆಯಲ್ಲಿ 1500 ಜನರಿಗೆ ಅವಕಾಶ: ನಗರದ 28 ಕ್ಷೇತ್ರದಲ್ಲಿ 1,500 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲು ಆಯೋಗವು ಅವಕಾಶ ನೀಡಿದೆ. ಇದರಿಂದಾಗಿ ಹೆಚ್ಚುವರಿ ಮತಗಟ್ಟೆಗಳ ಸಂಖ್ಯೆ 806ರಿಂದ 350 ಇಳಿದಿದೆ. ಜತೆಗೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಒಳಗೊಂಡ “ಪಿಂಕ್‌ ಮತಗಟ್ಟೆ’ ನಿರ್ಮಾಣಕ್ಕೂ ಆಯೋಗ ಒಪ್ಪಿಗೆ ನೀಡಿದೆ. ಈ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೆ, ಪುರುಷರಿಗೂ ಮತದಾನ ಮಾಡಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next