Advertisement

ರಕ್ಷಣಾ ಗೋಡೆ ನಿರ್ಮಿಸಲು ಒತ್ತಾಯ

12:19 PM Dec 13, 2017 | |

ಬಜಪೆ : ಮರವೂರು ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಡಿ. 10ರಂದು (ರವಿವಾರ) ಇಬ್ಬರು ಹುಡುಗಿಯರಿದ್ದ ಕಾರು ಇಲ್ಲಿ ನೀರಿಗೆ ಧುಮುಕಿದ್ದು, ಸ್ಥಳೀಯ ಯುವಕರ ಸಮಯ ಪ್ರಜ್ಞೆಯಿಂದ ಪ್ರಾಣಹಾನಿ ಆಗುವುದು ಅದೃಷ್ಟವಶಾತ್‌ ತಪ್ಪಿದೆ. ಇಲ್ಲಿ ಆಗಾಗ ಅವಘಡಗಳು ಸಂಭವಿಸುತ್ತಿದ್ದು, ನೀರಾಟವಾಡಲು ಬರುವ ಸ್ಥಳೀಯರು ಹಾಗೂ ಪ್ರವಾಸಿಗರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಲು ಇದು ಸಕಾಲ.

Advertisement

ಮರವೂರು ವೆಂಟೆಡ್‌ ಡ್ಯಾಮ್‌ ಗೆ ವಿದ್ಯಾರ್ಥಿಗಳು, ಯುವಜನತೆ ರಜಾದಿನ ಕಳೆಯಲು, ಸಂಜೆ ವೇಳೆ ಸುತ್ತಾಡಲು ಬರುತ್ತಾರೆ. ನದಿಯ ಎರಡು ದಂಡೆಗಳನ್ನು ಕಪ್ಪು ಬಂಡೆ ಕಲ್ಲಿನಿಂದ ಜೋಡಿಸಿ, 15 ಅಡಿ ಆಳದಿಂದ ಕಿಂಡಿ ಅಣೆಕಟ್ಟು ಕಟ್ಟಿದ್ದಾರೆ. ಇದಕ್ಕೆ ರಕ್ಷಣಾ ಗೋಡೆ ಇಲ್ಲ. 10 ಅಡಿಗೆ ಒಂದರಂತೆ, ಮೂರು ಅಡಿ ಎತ್ತರದ ಕಲ್ಲು ನೆಟ್ಟಿದ್ದಾರೆ. ಇವುಗಳ ನಡುವೆ ವಾಹನಗಳು ನುಸುಳಿ ಹೋಗುತ್ತವೆ. ನೀರಿಗೆ ಬಿದ್ದರೆ ಮೇಲೇರಿ ಬರಲು ಮೆಟ್ಟಿಲುಗಳ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಮರವೂರು ಸೇತುವೆಯಿಂದ ವೆಂಟೆಡ್‌ ಡ್ಯಾಮ್‌ ತನಕ ನದಿಯ ದಡಕ್ಕೆ ರಕ್ಷಣಾ ತಡೆಗೋಡೆ ಆಗಬೇಕಾಗಿದೆ.

ವೆಂಟೆಡ್‌ ಡ್ಯಾಮ್‌ ಮೇಲಿಂದ ಗ್ರಾಮಸ್ಥರೂ ಸಂಚರಿಸುತ್ತಿದ್ದು, ಅವರ ಜೀವ ರಕ್ಷಣೆಗೂ ಇದು ಅಗತ್ಯವಾಗಿದೆ. ಮರವೂರು ಸೇತುವೆಯ ಒಂದು ಕಡೆ ಮರವೂರು, ಮತ್ತೂಂದು ಕಡೆ ಮಹಾನಗರ ವ್ಯಾಪ್ತಿಯ ಮರಕಡವರೆಗೂ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ರಕ್ಷಣಾ ತಡೆಗೋಡೆ ಇಲ್ಲದ ಕಾರಣ ಇಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ. ವಿಮಾನ ನಿಲ್ದಾಣ ರಸ್ತೆಯೂ ಆಗಿರುವುದರಿಂದ ವಾಹನಗಳು ಹೆಚ್ಚು ವೇಗವಾಗಿ ಸಂಚರಿಸುತ್ತವೆ. ಇಲ್ಲಿ ರಾಜ್ಯ ಹೆದ್ದಾರಿ 67 ಕಿರಿದಾಗಿದೆ. ಅಪಘಾತ ಸಂಭವಿಸಿದರೆ ವಾಹನ ಸುಮಾರು 50 ಅಡಿ ಆಳಕ್ಕೆ ಬೀಳುತ್ತದೆ.

ಮರವೂರು ಸೇತುವೆಯ ಮರವೂರು ಬದಿಯಲ್ಲಿ ಒಂದೆಡೆ 20 ಮೀಟರ್‌ನಷ್ಟು ರಕ್ಷಣಾ ತಡೆಗೋಡೆ ನಿರ್ಮಾಣಗೊಂಡಿದೆ.ಬಾಕಿಯಿರುವ ಕಡೆಗಳಲ್ಲೂ ನಿರ್ಮಾಣ ಅಗತ್ಯವಾಗಿದೆ.

ಯುವತಿಯರ ರಕ್ಷಣೆ
ರವಿವಾರ ಅದ್ಯಪಾಡಿಯ ಚಂದ್ರಹಾಸ ದೇವಾಡಿಗ, ಕುಮಾರ ಡಿ. ಶೆಟ್ಟಿ ಮತ್ತು ಶರತ್‌ ಶೆಟ್ಟಿ ಅವರು ಮರವೂರು ಸೇತುವೆ ಮೂಲಕ ಕಾರಿನಲ್ಲಿ ಕಾವೂರಿಗೆ ಹೋಗುತ್ತಿದ್ದರು.

Advertisement

ಆಗ ನದಿ ನೀರಿನಲ್ಲಿ ಕಾರೊಂದು ತೇಲಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲಿ ನಿಂತಿದ್ದ ಇಬ್ಬರು, ಅದರಲ್ಲಿ ಜನರಿದ್ದಾರೆ ಎಂದು ಮಾಹಿತಿ ನೀಡಿದರು. ತಕ್ಷಣವೇ ಈ ಯುವಕರು ನೀರಿಗೆ ಧುಮುಕಿ ಕಾರಿನ ಬಳಿಗೆ ಈಜುತ್ತಾ ತೆರಳಿದರು.

ಅಷ್ಟರಲ್ಲಿ ಕಾರಿನ ಮುಂಭಾಗ ನೀರಿನಲ್ಲಿ ಮುಳುಗಿತ್ತು. ಕಾರಿನ ಗಾಜು ಮುಚ್ಚಿ ಲಾಕ್‌ ಮಾಡಿದ್ದರಿಂದ ಕಾರು ಮುಳುಗುವಿಕೆ ತುಸು ನಿಧಾನವಾಗಿತ್ತು. ಹಿಂಬದಿಯ ಬಾಗಿಲು ತೆರೆದಾಗ ಅದರಲ್ಲಿ ಇಬ್ಬರು ಹುಡುಗಿಯರು ರಕ್ಷಿಸುವಂತೆ ಬೊಬ್ಬೆ ಹಾಕುತ್ತಿದ್ದರು. ಆದರೆ, ಬಾಗಿಲು ತೆರೆದಾಕ್ಷಣ ಕಾರು ನೀರಲ್ಲಿ ಇನ್ನೂ ಮುಳುಗಿತು. ಈ ಪ್ರದೇಶದಲ್ಲಿ ಸುಮಾರು 20 ಅಡಿಯಷ್ಟು ನೀರಿದೆ. ಬೆಳಗ್ಗಿನ ಹೊತ್ತಲ್ಲಿ ಸಮುದ್ರದ ಮಟ್ಟ ಇಳಿಕೆಯಿದ್ದ ಕಾರಣ ನೀರಿನ ಪ್ರಮಾಣವೂ ಸ್ವಲ್ಪ ಕಡಿಮೆಯಾಗಿತ್ತು. ಹುಡುಗಿಯರಿಗೆ ಈಜು ಗೊತ್ತಿರಲಿಲ್ಲ. ನಾವು ಮೂವರೂ ಸೇರಿ ಎತ್ತಿಕೊಂಡು ಬಂದೆವು. ಅವರ ಕುತ್ತಿಗೆ ಭಾಗದ ವರೆಗೂ ನೀರು ಆವರಿಸಿತ್ತು.

ಇನ್ನೂ 10 ನಿಮಿಷ ಕಳೆದಿದ್ದರೆ ಕಾರು ನೀರಿನಲ್ಲಿ ಸಂಪೂರ್ಣ ಮುಳುಗಿ ಪ್ರಾಣಾಪಾಯವಾಗುತ್ತಿತ್ತು ಎಂದು ಯುವಕರು ವಿವರಿಸಿದರು. ಮರವೂರು ಸೇತುವೆಗೆ ಇಕ್ಕೆಲದಲ್ಲಿ ರಕ್ಷಣಾ ತಡೆಗೋಡೆ ಮಾಡಬೇಕು. ಸಂಚಾರ ಉತ್ತರ ಪೊಲೀಸ್‌ ಠಾಣೆ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ರಸ್ತೆ ಅಧಿಕೃತ ಅಲ್ಲ
ರಾಜ್ಯ ಹೆದ್ದಾರಿ 67ರಿಂದ ಮಳವೂರು ವೆಂಟಡ್‌ ಡ್ಯಾಂಗೆ ಹೋಗುವ ರಸ್ತೆ ಅಧಿಕೃತ ಅಲ್ಲ. ಕೇವಲ ಡ್ಯಾಂಗೆ ಹೋಗುವ ರಸ್ತೆ ಅದು. 45 ಅಡಿ ಅಗಲವಿದೆ. ಈಗಾಗಲೇ ರಕ್ಷಣಾ ಕಲ್ಲುಗಳನ್ನು ಹಾಕಲಾಗಿದೆ. ಹೊಳೆದಂಡೆ ಸಣ್ಣ ನೀರಾವರಿ ಇಲಾಖೆಗೆ ಸಂಬಂಧ ಪಟ್ಟ ವಿಚಾರ. ರಾಜ್ಯ ಹೆದ್ದಾರಿ ಮತ್ತು ಮಳವೂರು ಡ್ಯಾಂ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ.
ಪ್ರಭಾಕರ , ಜಿಲ್ಲಾ ಸಹಾಯಕ
   ಕಾರ್ಯಪಾಲಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next