Advertisement
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ, ಸರ್ವಿಸ್ ರಸ್ತೆ, ಮರವಂತೆ ಬೀಚ್‌ನಲ್ಲಿ ಪ್ರವಾಸಿಗರಿಂದ ಕಸ ಎಸೆಯುವುದು, ಅರೆಬರೆ ಬಂದರು ಕಾಮಗಾರಿ, ಬ್ರೇಕ್ ವಾಟರ್ ಕಾಮಗಾರಿ ಇವೆಲ್ಲ ಗ್ರಾಮದ ಪ್ರಮುಖ ಸಮಸ್ಯೆಗಳು.
Related Articles
Advertisement
ಮರವಂತೆ ಗ್ರಾಮದ ಕಡಲ ತೀರದ ನಿವಾಸಿಗಳಿಗೆ ಮಳೆಗಾಲ ಬಂತೆಂದರೆ ಸಾಕು ಭಯ ಆವರಿಸುತ್ತದೆ. ಪ್ರತೀ ವರ್ಷದ ಮಳೆಗಾಲದಲ್ಲಿ ಕಡಲ್ಕೊರೆತ ಭೀತಿಯಿರುತ್ತದೆ. ಕಳೆದ ವರ್ಷದ ತೌಖ್ತೆ ಚಂಡಮಾರುತದ ವೇಳೆಯೂ ಸಾಕಷ್ಟು ಹಾನಿಯಾಗಿತ್ತು. ಈಗಲೂ ಸುಮಾರು 200ರಷ್ಟು ಮನೆಗಳಿಗೆ ಕಡಲ್ಕೊರೆತ ಭೀತಿಯಿದೆ. ಇಲ್ಲಿ ಸುಮಾರು 1 ಕಿ.ಮೀ. ನಷ್ಟು ದೂರದವರೆಗೆ ಬೀಚ್ ಬದಿ “ಟಿ’ ಆಕಾರದ ತಡೆಗೋಡೆ ನಿರ್ಮಿಸಲಿ ಎನ್ನುವುದು ಇಲ್ಲಿನ ಜನರ ಬೇಡಿಕೆ.
ಹೆದ್ದಾರಿ ಅವ್ಯವಸ್ಥೆ
ಮರವಂತೆಯಲ್ಲಿ ಹಾದು ಹೋಗುವ ಹೆದ್ದಾರಿಯನ್ನು ಪ್ರವಾಸಿ ಸ್ನೇಹಿಯಾಗಿಸುವಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಬಗ್ಗೆ ಸಂಸದರು, ಶಾಸಕರು ಮುಂದಾಗಿದ್ದು, ಅದಿನ್ನೂ ಆರಂಭಿಕ ಹಂತದಲ್ಲಿದೆ. ಸರ್ವಿಸ್ ರಸ್ತೆಯೂ ಆಗಿಲ್ಲ. ಬಸ್ ನಿಲ್ದಾಣವೂ ನಿರ್ಮಾಣವಾಗಿಲ್ಲ. ಮಾರಸ್ವಾಮಿ ದೇವಸ್ಥಾನದ ಬಳಿಯ ಸೇತುವೆಗೆ ಹೆದ್ದಾರಿಯಿಂದ ಸಂಪರ್ಕ ರಸ್ತೆ ನಿರ್ಮಾಣವಾಗದೆ ನಿತ್ಯ ನೂರಾರು ಮಂದಿ ಸಮಸ್ಯೆ ಅನುಭವಿಸುವಂತಾಗಿದೆ.
ಇನ್ನಿತರ ಸಮಸ್ಯೆಗಳು
ಮರವಂತೆ ಗ್ರಾಮದಲ್ಲಿ 5,263 ಗ್ರಾಮಸ್ಥರಿದ್ದು, 1,163 ಮನೆಗಳಿವೆ. ಗ್ರಾಮದ ಶೇ. 50ರಷ್ಟು ಕೃಷಿಕರು, ಶೇ. 35ರಷ್ಟು ಮೀನುಗಾರರಿದ್ದಾರೆ. ಮರವಂತೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ, ಪ್ರವಾಸೋದ್ಯಮದ ನೆಲೆಯಲ್ಲಿ ಸಮರ್ಪಕ ಬಳಕೆಯಾಗುತ್ತಿಲ್ಲ. ಪ್ರವಾಸಿಗರು ಬೀಚ್‌ನಲ್ಲಿ ಕಸ ಎಸೆಯುತ್ತಿದ್ದರೂ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ದೊಡ್ಡ ತೋಡುಗಳ ನಿರ್ವಹಣೆ ಸರಿಯಿಲ್ಲದೆ ಕೃಷಿಗೆ ನೆರೆ ಹಾವಳಿ ಸಮಸ್ಯೆಯಿದೆ. ಗ್ರಾಮೀಣ ರಸ್ತೆಗಳ ಪಾಡಂತೂ ಹೇಳತೀರದಾಗಿದೆ. ಹೊರಬಂದರು ಕಾಮಗಾರಿ ಅರೆಬರೆಯಾಗಿದ್ದು, ಮೀನುಗಾರಿಕೆಗೆ ತೊಡಕಾಗಿದೆ.
ಮರವಂತೆಯ ವಿಶೇಷತೆ
ಶ್ರೀ ವಿಷ್ಣು, ಶ್ರೀ ವರಾಹ ಮತ್ತು ಶ್ರೀ ನರಸಿಂಹ ಈ ಮೂರು ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿರುವುದು ಮರವಂತೆಯ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದ ವೈಶಿಷ್ಟ್ಯ. ಕ್ಷಾತ್ರ ವಂಶಸ್ಥನಾದ ಅರಸನೊಬ್ಬ ತನ್ನ ವಿಚಾರ ಹೀನತನದಿಂದ ಪುತ್ರ ಹತ್ಯೆಯ ಪಾಪಕ್ಕೊಳಗಾಗಿ ಅದರ ಪ್ರಾಯಶ್ಚಿತ್ತಕ್ಕಾಗಿ ಈ ದೇಗುಲ ಸ್ಥಾಪಿಸಿದ ಎನ್ನುವ ಹಿನ್ನೆಲೆಯಿದೆ. ಮರವಂತೆ ಪ್ರದೇಶವು ಅರಬಿ ಸಮುದ್ರ ಮತ್ತು ಸೌಪರ್ಣಿಕಾ ನದಿಗಳ ನಡುವಿನ ಕಿರಿದಾದ ಭೂಭಾಗ. ದೇಗುಲ ನದಿಯ ದಂಡೆಯಲ್ಲಿದ್ದರೆ, ಅಲ್ಲಿಂದ ಸಮುದ್ರಕ್ಕಿರುವ ಅಂತರ ಕೇವಲ 150 ಮೀ. ಸಮುದ್ರ ಮತ್ತು ನದಿಗಳ ನಡುವೆ ರಾಷ್ಟ್ರೀಯ ಹೆದ್ದಾರಿ ಸಾಗುತ್ತದೆ.
ತುಂಬಾ ಸಮಸ್ಯೆಯಾಗುತ್ತಿದೆ: ಮಮರವಂತೆಯಲ್ಲಿ ಖಾಯಂ ವೈದ್ಯರಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಬೀಚ್‌ನಲ್ಲಿ ಕಸ ಎಸೆಯುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹೆದ್ದಾರಿ ಅವ್ಯವಸ್ಥೆಗಳನ್ನು ಆದಷ್ಟು ಸರಿಪಡಿಸಲಿ. ಮಾರಸ್ವಾಮಿ ದೇಗುಲ ಸಮೀಪ ರಸ್ತೆ ಸರಿಯಿಲ್ಲದೆ, ಅನೇಕ ಅವಘಡಗಳಾಗಿವೆ. ಈಗಲಾದರೂ ಸಮರ್ಪಕ ರಸ್ತೆ ನಿರ್ಮಾಣವಾಗಲಿ. –ಕರುಣಾಕರ್ ಆಚಾರ್ಯ, ಮರವಂತೆ
ಮನವಿ ಮಾಡಲಾಗಿದೆ: ಖಾಯಂ ವೈದ್ಯರ ನೇಮಕ ಕುರಿತಂತೆ ಈಗಾಗಲೇ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಮಾರಸ್ವಾಮಿ ದೇಗುಲದ ಬಳಿಯ ರಸ್ತೆ ಸಂಪರ್ಕಿಸುವ ಜಾಗದ ತಕರರಾರು ಈಗ ಇತ್ಯರ್ಥಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆಗಲಿದೆ. ಬ್ರೇಕ್ ವಾಟರ್ ಬೇಡಿಕೆ ಬಗ್ಗೆ ಶಾಸಕರು, ಸಂಸದರು, ಸಚಿವರಿಗೆ ಮನವಿ ಮಾಡಿದ್ದೇವೆ. –ಲೋಕೇಶ್ ಖಾರ್ವಿ, ಮರವಂತೆ ಗ್ರಾ.ಪಂ. ಉಪಾಧ್ಯಕ್ಷರು
– ಪ್ರಶಾಂತ್ ಪಾದೆ