Advertisement

ಮರವಂತೆ ಹೊರ ಬಂದರು: ಶೀಘ್ರ ಎರಡನೇ ಹಂತದ ಕಾಮಗಾರಿ

09:53 PM Oct 29, 2020 | mahesh |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಎರಡನೇ ಹಂತದಲ್ಲಿ ಬ್ರೇಕ್‌ವಾಟರ್‌ ವಿಸ್ತರಣೆ ಕಾಮಗಾರಿಗೆ ಈಗಾಗಲೇ ಸರಕಾರದಿಂದ 85 ಕೋ.ರೂ. ಮಂಜೂರಾಗಿ ಆಡಳಿತಾತ್ಮಕ ಅನುಮೋದನೆಯಾಗಿದ್ದು, ತಾಂತ್ರಿಕ ಅನುಮೋದನೆಗೆ ಮಾತ್ರ ಬಾಕಿ ಇದೆ. ಆ ಬಳಿಕ ಟೆಂಡರ್‌ ಕರೆದು, ಶೀಘ್ರದಲ್ಲೇ ಕಾಮಗಾರಿ ಆರಂಭ ಗೊಳ್ಳುವ ಸಾಧ್ಯತೆಗಳಿವೆ.

Advertisement

ಮರವಂತೆಯ ಬ್ರೇಕ್‌ವಾಟರ್‌ ವಿಸ್ತರಣೆಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿ ಯಿಂದಾಗಿ ಕಳೆದ ಆಗಸ್ಟ್‌ನಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಕಾಮಗಾರಿ
ನೀಲ ನಕಾಶೆ ತಯಾರಿಸಲಾಗಿದ್ದು, ಅದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಇನ್ನು ಅಂದಾಜು ಪಟ್ಟಿ, ಸಲಹಾ ಸಮಿತಿ ಮತ್ತು ತಾಂತ್ರಿಕ ಸಮಿತಿಯ ಅನುಮೋದನೆಯೊಂದೇ ಬಾಕಿ ಇದೆ.

ಮೀನುಗಾರರಿಗೆ ಅನುಕೂಲ
ಮೊದಲ ಹಂತದ ಕಾಮಗಾರಿ ವೇಳೆ ಎರಡು ಭಾಗ ಗಳಲ್ಲಿಯೂ ತಡೆಗೋಡೆ ನಿರ್ಮಾಣ ಅಪೂರ್ಣವಾಗಿದೆ. ಈ ಅರೆಬರೆ ಕಾಮಗಾರಿ ಯಿಂದಾಗಿ ಮೀನುಗಾರಿಕೆಗೆ ಬಹಳಷ್ಟು ಸಮಸ್ಯೆ ಯಾಗುತ್ತಿದೆ. ದೋಣಿಗಳು ಸುಲಭವಾಗಿ ಬಂದರಿನ ಒಳ ಪ್ರವೇಶಿಸಲು ಕಷ್ಟವಾಗುತ್ತಿದೆ. ಇಲ್ಲಿ ಸುಮಾರು 300ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿದ್ದಾರೆ. ಬೇರೆ ಕಡೆಗಳ ಮೀನುಗಾರಿಕೆ ದೋಣಿಗಳೂ ಇಲ್ಲಿಗೆ ಬರುತ್ತವೆ. ಎರಡನೇ ಹಂತದ ಕಾಮಗಾರಿಯಿಂದಾಗಿ ಇಲ್ಲಿನ ಮೀನುಗಾರರಿಗೆ ಬಹಳಷ್ಟು ಅನುಕೂಲವಾಗಲಿದೆ.

“ಯು’ ಆಕೃತಿ ಬಂದರು
ಮರವಂತೆಯ ಹೊರ ಬಂದರು ರಾಜ್ಯದ ಮೊದಲ “ಯು’ ಶೇಪ್‌ ಮಾದರಿಯ ಬಂದರಾಗಿದೆ. ಇತರ ಮೀನುಗಾರಿಕೆ ಬಂದರಿಗೂ ಇಲ್ಲಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬೇರೆಲ್ಲ ಬಂದರುಗಳು ಸಹಜ ಬಂದರು ಆಗಿದ್ದರೆ, ಇದು ಕೃತಕವಾಗಿ ನಿರ್ಮಿಸಿದ ಬಂದರಾಗಿದೆ. ಅಂದರೆ ಇಲ್ಲಿನ ಮೀನುಗಾರರು ಬೇರೆ ಬಂದರನ್ನು ಅವಲಂಬಿಸುವ ಬದಲು ತಮ್ಮ ಅನುಕೂಲಕ್ಕಾಗಿ ಸ್ವತಃ ಕೃತಕವಾಗಿ ನಿರ್ಮಿಸಿಕೊಂಡ ಬಂದರು ಇದಾಗಿದೆ.

ತಡೆಗೋಡೆ
ಮರವಂತೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಡಲ್ಕೊರೆತ ತಡೆಗಾಗಿ ಮೊದಲ ಹಂತದ ಕಾಮಗಾರಿಯಲ್ಲಿ ಉತ್ತರ ಭಾಗದಲ್ಲಿ 260 ಮೀ. ಹಾಗೂ ದಕ್ಷಿಣ ಭಾಗದಲ್ಲಿ 525 ಮೀ. ಒಟ್ಟು 785 ಮೀ. ಬ್ರೇಕ್‌ವಾಟರ್‌ (ಟೆಟ್ರಾಫೈಡ್‌) ನಿರ್ಮಾಣಗೊಂಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಎರಡನೇ ಹಂತದ ಕಾಮಗಾರಿಯಲ್ಲಿ ಉತ್ತರ ಭಾಗದಲ್ಲಿ 560 ಮೀ. ಹಾಗೂ ದಕ್ಷಿಣ ಭಾಗದಲ್ಲಿ 65 ಮೀ. ಸೇರಿ ಒಟ್ಟು 625 ಮೀ. ತಡೆಗೋಡೆ ನಿರ್ಮಾಣಗೊಳ್ಳಲಿದೆ.

Advertisement

ಆಡಳಿತಾತ್ಮಕ ಅನುಮೋದನೆ
ಮರವಂತೆಯ ಎರಡನೇ ಹಂತದ ಬ್ರೇಕ್‌ವಾಟರ್‌ ವಿಸ್ತರಣೆ ಕಾಮಗಾರಿಗೆ ರಾಜ್ಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಇನ್ನು ತಾಂತ್ರಿಕ ಒಪ್ಪಿಗೆ ಬಾಕಿಯಿದ್ದು, ಅದಾದ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ. -ಉದಯ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕೆ ಇಲಾಖೆ

ತ್ವರಿತವಾಗಿ ಆಗಲಿ
ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಆದಷ್ಟು ಬೇಗ ಆರಂಭಗೊಂಡರೆ ಮೀನುಗಾರರಿಗೆ ಪ್ರಯೋಜನವಾಗಲಿದೆ. ಬ್ರೇಕ್‌ವಾಟರ್‌ ವಿಸ್ತರಣೆ ಜತೆಗೆ ಬಂದರಿನಲ್ಲಿ ಹೂಳೆತ್ತಬೇಕಿದೆ. ಈಗ ಮೀನುಗಾರರು ತಮ್ಮ ಸ್ವಂತ ಖರ್ಚಿನಿಂದ ಅಲ್ಲಲ್ಲಿ ಸ್ವಲ್ಪ ಹೂಳೆತ್ತಿ ದೋಣಿ ಬರುವಂತೆ ಮಾಡುತ್ತಿದ್ದಾರೆ. ಈಗಾಗಲೇ ಈ ಎಲ್ಲ ವಿಚಾರವನ್ನು ಶಾಸಕರ ಗಮನಕ್ಕೆ ತರಲಾಗಿದೆ.
-ಸಂಜೀವ ಖಾರ್ವಿ, ಮರವಂತೆ, ಮೀನುಗಾರರು

Advertisement

Udayavani is now on Telegram. Click here to join our channel and stay updated with the latest news.

Next