Advertisement

ಮರಾಠಿಗ ಪ್ರಧಾನಿ: ಉದ್ಧವ್‌ ಠಾಕ್ರೆ ಪುನರುಚ್ಚಾರ

04:06 PM Dec 28, 2018 | |

ಮುಂಬಯಿ: ದೇಶವು ಭವಿಷ್ಯದಲ್ಲಿ ನನ್ನ ತಂದೆ ಮತ್ತು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್‌ ಠಾಕ್ರೆ ಅವರ ಸಿದ್ಧಾಂತಗಳನ್ನು ಅನುಸರಿಸುವ ಮರಾಠಿಗ ಪ್ರಧಾನಮಂತ್ರಿ ಹುದ್ದೆಯನ್ನು  ಪಡೆಯಲಿದ್ದಾರೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

Advertisement

ಬುಧವಾರ ಬಿಡುಗಡೆಯಾದ ಠಾಕ್ರೆ ಚಿತ್ರದ ಎರಡನೇ ಟ್ರೈಲರ್‌ನಲ್ಲಿರುವ ದೃಶ್ಯವೊಂದನ್ನು ಉಲ್ಲೇಖೀಸಿ ಉದ್ಧವ್‌ ಠಾಕ್ರೆ ಅವರು ಈ ಹೇಳಿಕೆಯನ್ನು ನೀಡಿರುವುದಾಗಿದೆ.  ಠಾಕ್ರೆ ಚಿತ್ರದ ಎರಡನೇ ಟ್ರೈಲರ್‌ನಲ್ಲಿ  ಬಾಳ್‌ ಠಾಕ್ರೆ ಅವರು ಮರಾಠಿ ಪ್ರಧಾನಮಂತ್ರಿಯ ಅಗತ್ಯವನ್ನು ಒತ್ತಿ ಹೇಳುತ್ತಿರುವಂತೆ ತೋರಿಸಲಾಗಿದೆ.

ಭವಿಷ್ಯದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅಥವಾ ಬಿಜೆಪಿ ಸಚಿವ ನಿತಿನ್‌ ಗಡ್ಕರಿ ಅವರ ಹೆಸರು ಕೇಳಿಬಂದರೆ, ನೀವು ಅವರಲ್ಲಿ ಯಾರನ್ನು ಬೆಂಬಲಿಸುವಿರಿ? ಎಂದು ಮಾಧ್ಯಮದವರು ಪ್ರಶ್ನಿಸಿ ದಾಗ ಉದ್ಧವ್‌   ಅದಕ್ಕೆ ಉತ್ತರಿಸಲು ನಿರಾಕರಿಸಿದರು.

ಭಾರತವು ಬಾಳಾಸಾಹೇಬ್‌ ಅವರು  ಪ್ರಸ್ತಾವಿಸಿರುವ ಸಿದ್ಧಾಂತ ಗಳನ್ನು ಅನುಸರಿಸುವ ಮರಾಠಿಗ ಪ್ರಧಾನಮಂತ್ರಿಯನ್ನು ಪಡೆಯಲಿದೆ ಎಂದು ಉದ್ಧವ್‌ ಹೇಳಿದ್ದಾರೆ.

ಈ ಚಿತ್ರದಲ್ಲಿರುವ ದಕ್ಷಿಣ ಭಾರತೀಯರು ಮತ್ತು ಬಾಬರಿ ಮಸೀದಿ ವಿವಾದಗಳಿಗೆ ಸಂಬಂಧಿಸಿದ ಸಂಭಾಷಣೆಗಳು ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್ ಸರ್ಟಿಫಿಕೇಶನ್‌(ಸಿಬಿಎಫ್‌ಸಿ)ನಿಂದ ವಿರೋಧಕ್ಕೊಳಗಾಗಿದೆಯೆಂದು ಕೆಲವೊಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.  ವಾಸ್ತವವಾಗಿ, ಬಾಳ್‌ ಠಾಕ್ರೆ ಅವರು ಮರಾಠಿಗರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವುದಕ್ಕಾಗಿ ದಕ್ಷಿಣ ಭಾರತೀಯರ ಮೇಲೆ ದಾಳಿ ನಡೆಸುವುದರೊಂದಿಗೆ ತಮ್ಮ ರಾಜಕೀಯ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಅಷ್ಟೇ ಅಲ್ಲದೆ, ಅವರು ಬಾಬರಿ ಮಸೀದಿ ಧ್ವಂಸವನ್ನು ಕೂಡ ಸಮರ್ಥಿಸಿಕೊಂಡಿದ್ದರು. ಹಾಗೆಯೇ ಅದರ ಶ್ರೇಯಸ್ಸನ್ನು ಗಿಟ್ಟಿಸಿಕೊಂಡಿದ್ದರು.

Advertisement

ಆದಾಗ್ಯೂ, ಚಿತ್ರ ನಿರ್ದೇಶಕ ಅಭಿಜಿತ್‌ ಪನ್ಸೆ ಅವರು ಈ ಕುರಿತ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದು ಅಂತಹ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ನಾವು ನಮ್ಮ ಚಿತ್ರವನ್ನು ಸಿಬಿಎಫ್‌ಸಿಗೆ ಸಲ್ಲಿಸಿದ್ದೇವೆ, ಆದರೆ ಅಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ ಎಂದು ಪಾನ್ಸೆ ನುಡಿದಿದ್ದಾರೆ.

ಜನವರಿ 25ರಂದು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ. ಶಿವಸೇನೆ ನಾಯಕ ಸಂಜಯ್‌ ರಾವುತ್‌ ಅವರು ಬರೆದ ಈ ಜೀವನಚರಿತ್ರೆಗೆ ಅಭಿಜಿತ್‌ ಪನ್ಸೆ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  ಚಿತ್ರದಲ್ಲಿ ನಟ ನವಾಜುದ್ದೀನ್‌ ಸಿದ್ದಿಕಿ ಅವರು   ಠಾಕ್ರೆ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಭಯವಿಲ್ಲದ ಜೀವನ ನ‌ಡೆಸಿದ್ದರು 
ಬಾಳಾಸಾಹೇಬ್‌ ಅವರು ಭಯವಿಲ್ಲದ ಜೀವನವನ್ನು ನಡೆಸಿದ್ದರು. ಅವರ ಜೀವನಾಧಾರಿತ ಚಿತ್ರದಲ್ಲಿ   ಕಡಿತ ಅಥವಾ ಸೆನ್ಸಾರ್‌ಶಿಪ್‌ ಇರುವುದಿಲ್ಲ ಎಂದು ಚಿತ್ರದ ನಿರ್ಮಾಪಕ ಮತ್ತು ಶಿವಸೇನೆ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next