Advertisement
ಮಹಾರಾಷ್ಟ್ರ ಬಂದ್‌ನ ಎರಡನೇ ದಿನವಾದ ಇಂದು ರೈಲು, ವಾಹನಗಳ ಓಡಾಟ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ತೀವ್ರವಾಗಿ ಬಾಧಿತವಾದವು. ಇಂದು ಬೆಳಗ್ಗೆ ದುಷ್ಕರ್ಮಿಗಳು ಮನ್‌ಖುರ್‌ದ್ ನಲ್ಲಿ ಕಲ್ಲೆಸೆತ ನಡೆಸಿ ಬಸ್ಸಿಗೆ ಬೆಂಕಿ ಹಚ್ಚಿದರು.
Related Articles
Advertisement
ಇಂದು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿರುವ ಮರಾಠ ಮೀಸಲಾತಿ ಚಳವಳಿ ಇನ್ನಷ್ಟು ತೀವ್ರತೆಯನ್ನು ಕಂಡಿದೆ. ಇಂದು ಬೆಳಗ್ಗೆ ಮತ್ತೋರ್ವ ಪ್ರತಿಭಟನಕಾರ ಜಗನ್ನಾಥ ಸೋನವಾನೆ ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೋನವಾನೆ ಸಾವನ್ನು ಅನುಸರಿಸಿ ಕೋಪೋದ್ರಿಕ್ತರಾಗಿರುವ ಪ್ರತಿಭಟನಕಾರರು ಮುಂಬಯಿಯಲ್ಲಿ ಮಾತ್ರವಲ್ಲದೆ ಇನ್ನೂ ಹಲವು ಕಡೆಗಳಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡಿ ವಾಹನಗಳ ಸಂಚಾರವನ್ನು ತಡೆದಿದ್ದಾರೆ.
ಮೊನ್ನೆ ಸೋಮವಾರ ಮೀಸಲಾತಿ ಪ್ರತಿಭಟನಕಾರ ಕಾಕಾಸಾಹೇಬ್ ಶಿಂಧೆ ಔರಂಗಾಬಾದ್ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮರಾಠ ಸಮುದಾಯದವರು ತಮಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಆಂದೋಲನ ನಡೆಸುತ್ತಿದ್ದಾರೆ.
ಆತ್ಮಾಹುತಿ ಮಾಡಿಕೊಂಡಿರುವ ಕಾಕಾಸಾಹೇಬ್ ಶಿಂಧೆ ಮತ್ತು ಜಗನ್ನಾಥ ಸೋನವಾನೆ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದೂ ಮರಾಠ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಮರಾಠ ಕ್ರಾಂತಿ ಸಮಾಜ ಇಂದು ಬುಧವಾರ ಶಾಂತಿಯುತ ಬಂದ್ ಗೆ ಕರೆ ನೀಡಿದೆ. ಪ್ರತಿಭಟನಕಾರರು ಮುಂಬಯಿ ಬಂದ್ ಗೆ ಕರೆ ನೀಡಿದ್ದಾರೆ.
ನಿನ್ನೆಯ ಆಂದೋಲನ ಹಿಂಸೆಗೆ ತಿರುಗಿದ ಪರಿಣಾಮವಾಗಿ ಕಲ್ಲೆಸೆತಕ್ಕೆ ಗುರಿಯಾಗಿ ಓರ್ವ ಕಾನ್‌ಸ್ಟೆಬಲ್ ಮೃತಪಟ್ಟು ಇತರ 9 ಮಂದಿ ಪೊಲೀಸರು ಗಾಯಗೊಂಡಿದ್ದರು. ಮೂವರು ಪ್ರತಿಭಟನಕಾರರು ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸ್ ಮತ್ತು ಇತರ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.